ಮುಟ್ಟು ಮಹಿಳೆಯರಿಗೆ ಪ್ರತಿ ತಿಂಗಳು ಕಾಡುವ ಸಮಸ್ಯೆ. ಕೆಲವರು ಮುಟ್ಟಿನ ಸಮಯದಲ್ಲಿ ನೋವು ತಿಂದ್ರೆ ಮತ್ತೆ ಕೆಲವರು ಹೆಚ್ಚು ರಕ್ತಸ್ರಾವದಿಂದ ಬಳಲ್ತಾರೆ. ಈ ಮುಟ್ಟಿನ ಬಗ್ಗೆ ಅನಾದಿ ಕಾಲದಿಂದಲೂ ಕೆಲವೊಂದು ತಪ್ಪು ಕಲ್ಪನೆಗಳಿವೆ. ಆ ತಪ್ಪುಕಲ್ಪನೆಗಳೇನು ಎಂಬುದನ್ನು ಮಹಿಳೆಯರು, ಯುವಜನತೆ ತಿಳಿದುಕೊಳ್ಳುವುದು ಸೂಕ್ತ.
ಮುಟ್ಟಿನ ವೇಳೆ ವ್ಯಾಯಾಮ ಮಾಡುವುದು ಅಪಾಯಕಾರಿಯೇ ಎಂಬುದು ಅನೇಕರ ಪ್ರಶ್ನೆ. ಆದ್ರೆ ಸಂಶೋಧನೆಯೊಂದು ಮುಟ್ಟಿನ ವೇಳೆ ವ್ಯಾಯಾಮ ಮಾಡಬಹುದು ಎಂದಿದೆ. ವಾರಕ್ಕೆ 15 ರಿಂದ 75 ನಿಮಿಷಗಳ ಕಾಲ ವ್ಯಾಯಾಮ ಮಾಡಬಹುದು. ಮುಟ್ಟಿನ ಸಮಯದಲ್ಲಿ ಕೂಡ ವ್ಯಾಯಾಮ ಮಾಡಬಹುದು. ವ್ಯಾಯಾಮದಿಂದ ಬರುವ ಬೆವರು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಮುಟ್ಟು ಒಂದು ವಾರದಲ್ಲಿ ಕಡಿಮೆಯಾಗಬೇಕು ಎನ್ನುವುದು ಕೆಲವರ ವಾದ. ಆದ್ರೆ ಮುಟ್ಟು ಒಂದೇ ವಾರದಲ್ಲಿ ಕಡಿಮೆಯಾಗಬೇಕು, 4 ದಿನಕ್ಕೆ ಮುಗಿಯಬೇಕೆಂಬ ನಿಯಮವಿಲ್ಲ. ಅವರವರ ದೇಹದ ಮೇಲೆ ಇದು ಅವಲಂಬಿಸಿದೆ. ವಯಸ್ಸಾದಂತೆ ಮುಟ್ಟಿನಲ್ಲಿಯೂ ವ್ಯತ್ಯಾಸವಾಗುತ್ತದೆ.
ಮುಟ್ಟಿನ ವೇಳೆ ಶಾರೀರಿಕ ಸಂಬಂಧ ಬೆಳೆಸಿದ್ರೆ ಗರ್ಭಧಾರಣೆಯಾಗೋದಿಲ್ಲ ಎಂಬ ನಂಬಿಕೆಯೂ ಇದೆ. ಆದ್ರೆ ಇದು ಸುಳ್ಳು. ಮುಟ್ಟಿನ ಸಮಯದಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಗರ್ಭಿಣಿಯಾಗುವ ಸಾಧ್ಯತೆಯಿರುತ್ತದೆ.
ಒಟ್ಟಿಗೆ ವಾಸಿಸುವ ಮಹಿಳೆಯರು ಒಂದೇ ಬಾರಿ ಮುಟ್ಟಾಗ್ತಾರೆ ಎಂಬ ನಂಬಿಕೆಯಿದೆ. ಆದ್ರೆ ಇದು ಕೂಡ ಸತ್ಯವಲ್ಲ. ಒಂದೇ ಆಹಾರ ಸೇವನೆ ಮಾಡುವ, ಒಂದೇ ಸಮಯದಲ್ಲಿ ನಿದ್ರೆ ಮಾಡುವ ಹಾಗೂ ಒಂದೇ ರೀತಿ ಜೀವನ ಶೈಲಿ ಅನುಸರಿಸುವ ಮಹಿಳೆಯರು ಒಟ್ಟಿಗೆ ಮುಟ್ಟಾಗುವ ಸಾಧ್ಯತೆಯಿರುತ್ತದೆ.