ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮು ಬರುವುದು ತೀರಾ ಸಹಜ. ಆದರೆ ಬೇಸಿಗೆಯಲ್ಲೂ ಒಮ್ಮೊಮ್ಮೆ ನೆಗಡಿ, ಕೆಮ್ಮಿನಿಂದ ನಾವು ಹೈರಾಣಾಗಿಬಿಡುತ್ತೇವೆ. ಬೇಸಿಗೆಯಲ್ಲಿ ನೆಗಡಿ ಕಾಣಿಸಿಕೊಂಡರೆ ದುಪ್ಪಟ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೊದಲೇ ಬಿಸಿಲಿನಿಂದ ತತ್ತರಿಸಿರುವ ಜನರಿಗೆ ಮೂಗಲ್ಲಿ ಸೋರುವಿಕೆ, ಕಫ, ಕೆಮ್ಮಿನಿಂದ ಸುಸ್ತಾಗಿಬಿಡುತ್ತೇವೆ. ಬೇಸಿಗೆಯಲ್ಲಿ ಕಾಡುವ ಶೀತ, ಕೆಮ್ಮಿಗೆ ಅಜ್ಜಿಯರ ಕಾಲದ ಕೆಲವೊಂದು ಮನೆ ಮದ್ದುಗಳನ್ನು ಮಾಡಬೇಕು.
ಸ್ಟೀಮ್ : ಶೀತವಾದಾಗ ಸ್ಟೀಮ್ ತೆಗೆದುಕೊಳ್ಳಬೇಕು. ಇದು ಅತ್ಯಂತ ಪರಿಣಾಮಕಾರಿ ಚಿಕಿತ್ಸೆಗಳಲ್ಲೊಂದು. ಪಾತ್ರೆಯೊಂದರಲ್ಲಿ ನೀರು ಕುದಿಸಿ, ಅದಕ್ಕೆ ವಿಕ್ಸ್ ಅಥವಾ ಶೀತಕ್ಕಾಗಿಯೇ ಬಳಸುವ ಚಿಕ್ಕ ಟ್ಯೂಬ್ ಅನ್ನು ಹಾಕಿ. ತಲೆಗೆ ಬಟ್ಟೆ ಮುಚ್ಚಿಕೊಂಡು ಹಬೆ ತೆಗೆದುಕೊಳ್ಳಿ. ಇದು ಕಫವನ್ನು ಕರಗಿಸಿ ತಲೆಯನ್ನು ಹಗುರ ಮಾಡುತ್ತದೆ.
ಬೆಳ್ಳುಳ್ಳಿ: ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ, ವೈರಸ್ ವಿರುದ್ಧ ಹೋರಾಡುವ ಗುಣಲಕ್ಷಣಗಳು ಬೆಳ್ಳುಳ್ಳಿಯಲ್ಲಿ ಕಂಡುಬರುತ್ತವೆ. ಶೀತವಾದಾಗ ಈರುಳ್ಳಿ ಸೇವನೆ ಮಾಡುವುದರಿಂದ ನಿಮ್ಮನ್ನು ಅದು ಬೆಚ್ಚಗಿಡುತ್ತದೆ. ಹಸಿ ಬೆಳ್ಳುಳ್ಳಿಯನ್ನೇ ಅಗಿದು ತಿನ್ನಬಹುದು. ಅದು ಕಷ್ಟವೆನಿಸಿದರೆ ಬಾಣೆಲೆಯಲ್ಲಿ ಹುರಿದುಕೊಂಡು ಸೇವಿಸಿ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ, ಅನೇಕ ರೀತಿಯ ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಆಮ್ ಪನ್ನಾ: ಬೇಸಿಗೆ ಕಾಲದಲ್ಲಿ ಆಮ್ ಪನ್ನಾ ಕುಡಿಯುವುದರಿಂದ ಹೀಟ್ ಸ್ಟ್ರೋಕ್ ನಿಂದ ಪಾರಾಗಬಹುದು. ಈ ಮಾಂತ್ರಿಕ ಪಾನೀಯ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಗಂಟಲು ಮತ್ತು ಮೂಗಿನ ಕಫವನ್ನು ಕಡಿಮೆ ಮಾಡುತ್ತದೆ.
ಶುಂಠಿ: ಬೇಸಿಗೆಯಲ್ಲಿ ಕಾಡುವ ಶೀತ, ಕೆಮ್ಮು , ಜ್ವರಕ್ಕೆ ಶುಂಠಿಯೂ ಉತ್ತಮ ಮದ್ದು. ಶುಂಠಿಯನ್ನು ಅಗಿದು ತಿನ್ನಿ ಅಥವಾ ಚಹಾಕ್ಕೆ ಹಾಕಿಕೊಂಡು ಶುಂಠಿ ಚಹಾವನ್ನು ಸೇವನೆ ಮಾಡಿದ್ರೆ ನೆಗಡಿ ಕಡಿಮೆಯಾಗುತ್ತದೆ.