ಬೆಂಗಳೂರಿನಲ್ಲಿ 30 ಅಡಿ ಎತ್ತರದ ಕನ್ನಡಾಂಬೆ ಭುವನೇಶ್ವರಿ ದೇವಿಯ ಪ್ರತಿಮೆ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಈ ಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಒಪ್ಪಿಗೆ ನೀಡಿದ್ದು, 2 ಕೋಟಿ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣವಾಗಲಿದೆ.
ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ಕಲಾಗ್ರಾಮದಲ್ಲಿ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು. ಸುಮಾರು ಅರ್ಧ ಎಕರೆ ಜಾಗದಲ್ಲಿ ಪ್ರತಿಮೆ ತಲೆಎತ್ತಲಿದೆ. ಪ್ರತಿಮೆ ನಿರ್ಮಾಣದ ಜವಾಬ್ಧಾರಿಯನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ನೀಡಲಾಗಿದೆ. ಅಕಾಡೆಮಿ ಚಿತ್ರಿಸುವ ವಿನ್ಯಾಸವನ್ನು ತಜ್ಞರು ಪರಿಶೀಲಿಸಲಿದ್ದಾರೆ.
ಭುವನೇಶ್ವರಿ ದೇವಿಗೆ ಮೀಸಲಾದ ಮೊದಲ ವಿಶೇಷ ಪ್ರತಿಮೆ ಇದಾಗಿದೆ. 10 ಅಡಿ ಬೇಸ್ ಮೇಲೆ 30 ಅಡಿ ಎತ್ತರದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು. ಕರ್ನಾಟಕದ ಸಂಸ್ಕೃತಿಯನ್ನು ಈ ಪ್ರತಿಮೆ ಬಿಂಬಿಸುತ್ತದೆ.
ನವೆಂಬರ್‌ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಪ್ರತಿಮೆ ಸಂಪೂರ್ಣ ಸಿದ್ಧವಾಗುವ ನಿರೀಕ್ಷೆ ಇದೆ. ಪ್ರತಿಮೆ ಸಿದ್ಧವಾದ ಬಳಿಕ ಕಲಾಗ್ರಾಮವನ್ನು ಪ್ರವಾಸಿ ತಾಣವಾಗಿ ಪರಿವರ್ತಿಸುವ ಯೋಜನೆಯೂ ಇದೆ. ಕಲಾಗ್ರಾಮ ಆಡಿಟೋರಿಯಂನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ.
ಇನ್ನೊಂದೆಡೆ ಬೆಂಗಳೂರು ಸಂಸ್ಥಾಪಕ ಕೆಂಪೇಗೌಡರ 108 ಅಡಿ ಪ್ರತಿಮೆಗೆ ಸರ್ಕಾರ ಈಗಾಗಲೇ 85 ಕೋಟಿ ರೂಪಾಯಿ ವೆಚ್ಚ ಮಾಡ್ತಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 23 ಎಕರೆ ಜಾಗದಲ್ಲಿ ಪ್ರತಿಮೆ ನಿರ್ಮಾಣವಾಗಲಿದೆ.