ಸಾವಿರಾರು ಪ್ರಬೇಧದ ಹೂವು ಬಿಡುವ, ಹಣ್ಣು ಬಿಡುವ ಅಥವಾ ಅಲಂಕಾರಕ್ಕಾಗಿ ಬಳಸುವ ಸಸ್ಯಗಳನ್ನು ನಾವು ನೋಡಿದ್ದೇವೆ. ಇಂತಹ ಸಸ್ಯರಾಶಿಯಲ್ಲಿ ಕೆಲವು ವಿಷಕಾರಿಯೂ ಆಗಿರುತ್ತವೆ.
ಹೆಮ್ ಲಾಕ್ ಎನ್ನುವುದೊಂದು ವಿಷಸಸ್ಯ. ಸಾಮಾನ್ಯವಾಗಿ ಇದು ತೇವವಿರುವ ಸ್ಥಳದಲ್ಲಿ ಬೆಳೆಯುತ್ತದೆ. ಈ ಗಿಡದಲ್ಲಿ ಸುಂದರವಾದ ಬಿಳಿಯ ಹೂವುಗಳು ಬಿಡುತ್ತವೆ. ಹೂವು ಸುಂದರವಾಗಿದ್ದರೂ ದುರ್ಗಂಧ ಬೀರುತ್ತದೆ. ಈ ಗಿಡದ ಬೇರು ಮತ್ತು ಬೀಜಗಳು ಕೂಡ ಅಷ್ಟೇ ಅಪಾಯಕಾರಿ. ಇದರಿಂದ ಕೊನಿಐನ್ ಎಂಬ ವಿಷವನ್ನು ತಯಾರಿಸುತ್ತಾರಂತೆ. ಇದರ ವಿಷ ಎಷ್ಟು ಪ್ರಭಾವಶಾಲಿ ಎಂದರೆ ಇದನ್ನು ಕುಡಿದ ಸ್ವಲ್ಪ ಹೊತ್ತಿನಲ್ಲೇ ಮೈಎಲ್ಲ ತಣ್ಣಗಾಗಿ ವ್ಯಕ್ತಿ ಸಾವನ್ನಪ್ಪುತ್ತಾನೆ. ಈ ಸಸ್ಯದ ಕಷಾಯ ಕುಡಿದರೂ ಸಾವು ನಿಶ್ಚಿತ.
ಕಿತ್ತಳೆಯಂತಹ ಹಣ್ಣುಗಳನ್ನು ಕೊಡುವ ಹೆಮ್ಮುಷ್ಟಿ ಮರ, ಹೆಮ್ ಲಾಕ್ ಗಿಂತಲೂ ವಿಷಕಾರಿ. ಏಷಿಯಾದಲ್ಲಿರುವ ಈ ಸಸ್ಯವನ್ನು ನಕ್ಸ್ ವಾಮಿಕ್ ಎಂದು ಕರೆಯುತ್ತಾರೆ. ಇದರಲ್ಲಿ ಬೆಳೆಯುವ ಹಣ್ಣಿನ ಬೀಜದಿಂದ ಸ್ಟ್ರೆಕ್ ನೈನ್ ಎಂಬ ವಿಷವನ್ನು ತಯಾರಿಸುತ್ತಾರೆ. ಇದರ ಸೇವನೆಯಿಂದ ನಾಡಿ ಬಡಿತ ನಿಂತುಹೋಗುತ್ತದೆ.
ಮೆಡೊ ಸೆಫ್ರನ್ ಎಂಬ ಗಿಡದ ಬೀಜದಿಂದ ಕೊಲ್ಕಿಸಿನ್ ಎಂಬ ವಿಷ ಪದಾರ್ಥವನ್ನು ತೆಗೆಯುತ್ತಾರೆ. ಇದು ನಿಧಾನಗತಿಯಲ್ಲಿ ಮನುಷ್ಯನನ್ನು ಸಾಯಿಸುತ್ತದೆ. ಸಂಧಿವಾತದ ರೋಗದ ಚಿಕಿತ್ಸೆಯಲ್ಲಿ ಈ ವಿಷವನ್ನು ಬಳಸುತ್ತಾರೆ. ಚೆರ್ರಿ ಲಾರೆರ್ ಎಂಬ ಗಿಡದಿಂದ ಪ್ರಸ್ಸಿಕ್ ಆ್ಯಸಿಡ್ ಎಂಬ ಪ್ರಭಾವಶಾಲಿ ವಿಷವನ್ನು ತಯಾರಿಸುತ್ತಾರೆ.
ಒಟ್ಟಿನಲ್ಲಿ ಸಸ್ಯ ಪ್ರಬೇಧಗಳ ಪೈಕಿ ಕೆಲವು ಒಳಿತಿಗಾಗಿ ಬಳಕೆಯಾದರೆ ಇನ್ನು ಕೆಲವು ನಮ್ಮನ್ನು ಸಾವಿನ ಕೂಪಕ್ಕೆ ನೂಕುವಂತವಾಗಿವೆ.