ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಎಂಬ ಆಸೆ ಇರುತ್ತದೆ. ಅಂತಹವರು ಬೇಗನೆ ಆಗುವ ಈ ಪನ್ನೀರ್ ಬಿರಿಯಾನಿಯನ್ನು ಒಮ್ಮೆ ಮಾಡಿ ನೋಡಿ. ಇದು ತಿನ್ನುವುದಕ್ಕೂ ರುಚಿಕರವಾಗಿರುತ್ತೆ. ಜತೆಗೆ ಬೇಗನೆ ಆಗುತ್ತದೆ.
ಬೇಕಾಗುವ ಸಾಮಾಗ್ರಿಗಳು: 1ಕಪ್ –ಬಾಸುಮತಿ ಅಕ್ಕಿ, 150 ಗ್ರಾಂ-ಪನ್ನೀರ್, 2 ದೊಡ್ಡ-ಈರುಳ್ಳಿ ಉದ್ದಕ್ಕೆ ಕತ್ತರಿಸಿಕೊಂಡಿದ್ದು, 3-ಟೊಮೆಟೋ, 1 ಟೇಬಲ್ ಸ್ಪೂನ್-ಶುಂಠಿ ಬೆಳ್ಳುಳ್ಳಿ ಪೇಸ್ಟ್, 2-ಹಸಿಮೆಣಸು ಉದ್ದಕ್ಕೆ ಸೀಳಿಕೊಳ್ಳಿ, ½ ಕಪ್-ಪುದೀನಾ ಎಲೆ, ½ ಕಪ್ ಕೊತ್ತಂಬರಿಸೊಪ್ಪು, ಅರಿಶಿನ ಪುಡಿ-1 ಟೀ ಸ್ಪೂನ್, ½ ಟೇಬಲ್ ಸ್ಪೂನ್- ಖಾರದ ಪುಡಿ, ½ ಟೇಬಲ್ ಸ್ಪೂನ್-ಧನಿಯಾ ಪುಡಿ, 1 ಟೀ ಸ್ಪೂನ್-ಗರಂ ಮಸಾಲ, ತುಪ್ಪ-1 ಟೇಬಲ್ ಸ್ಪೂನ್, ಚಕ್ಕೆ,1/2 ಇಂಚು, ಪಲಾವ್ ಎಲೆ-1, ಏಲಕ್ಕಿ-2, ಲವಂಗ-ಎರಡು, ಮೊಸರು—1/4 ಕಪ್ ಎಣ್ಣೆ-2 ಟೇಬಲ್ ಸ್ಪೂನ್.
ಒಂದು ಕುಕ್ಕರ್ ಗೆ ಎಣ್ಣೆ ಹಾಕಿ ಅದಕ್ಕೆ ಪನ್ನೀರ್ ಹಾಕಿ 2 ನಿಮಿಷ ಹುರಿದುಕೊಂಡು ಬೇರೆ ಪಾತ್ರೆಗೆ ತೆಗೆದಿಟ್ಟುಕೊಳ್ಳಿ. ನಂತರ ಆ ಎಣ್ಣೆಗೆ ಚಕ್ಕೆ, ಪಲಾವ್ ಎಲೆ, ಲವಂಗ, ಏಲಕ್ಕಿ ಹಾಕಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಟೊಮೆಟೊ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
ಇದಕ್ಕೆ ಗರಂ ಮಸಾಲ, ಖಾರದಪುಡಿ, ಅರಿಶಿನ, ಧನಿಯಾಪುಡಿ, ಖಾರದಪುಡಿ ಹಾಕಿ. ಆಮೇಲೆ ಮೊಸರು, ಕೊತ್ತಂಬರಿಸೊಪ್ಪು, ಪುದೀನಾ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ 2 ಕಪ್ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಆಮೇಲೆ ಅಕ್ಕಿ ಹಾಕಿ. ನಂತರ ಪನ್ನೀರ್ ಹಾಕಿ ಮಿಶ್ರಣ ಮಾಡಿ ಕುಕ್ಕರ್ ಮುಚ್ಚಿ ಎರಡು ವಿಷಲ್ ಕೂಗಿಸಿಕೊಂಡರೆ ರುಚಿಕರವಾದ ಪನ್ನೀರ್ ಬಿರಿಯಾನಿ ರೆಡಿಯಾಗುತ್ತೆ.