
ಈ ವರ್ಷ ಮಾ. 22ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತೆ. ಈ ಹಬ್ಬವನ್ನು ದೇಶದ ಹಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಇದನ್ನು ಸುಗ್ಗಿಯ ದಿನವಾಗಿ ಕೂಡ ಆಚರಿಸುತ್ತಾರೆ.
ಈ ದಿನದಂದು ಭಗವಾನ್ ಬ್ರಹ್ಮ ವಿಶ್ವವನ್ನು ಸೃಷ್ಟಿಸಿದ್ದಾನೆ ಎಂಬ ನಂಬಿಕೆ ಇದೆ. ಹಾಗಾಗಿ ಈ ದಿನವನ್ನು ಹಿಂದೂಗಳು ಹೊಸ ವರ್ಷದ ಆರಂಭವೆಂದು ಹೇಳುತ್ತಾರೆ. ಅಲ್ಲದೇ ರಾಮ ರಾವಣನನ್ನು ಸಂಹರಿಸಿ ಸೀತೆಯೊಂದಿಗೆ ಅಯೋಧ್ಯೆಗೆ ಮರಳಿದನು ಎನ್ನಲಾಗಿದೆ. ಹಾಗೇ ಈ ದಿನದಂದು ಸಿಹಿ ಕಹಿಯ ಸಂಕೇತವಾದ ಬೇವು ಮತ್ತು ಬೆಲ್ಲವನ್ನು ಸೇವಿಸಲಾಗುತ್ತದೆ. ಇದು ಜೀವನದ ಸುಖ-ದುಃಖದ ಸಂಕೇತವಾಗಿದೆ ಎನ್ನಲಾಗಿದೆ. ಅಲ್ಲದೇ ಇದು ವ್ಯಕ್ತಿ ರೋಗದಿಂದ ಮುಕ್ತನಾಗುತ್ತಾನೆ ಎಂಬ ಅರ್ಥವನ್ನು ಸೂಚಿಸುತ್ತದೆ.
ಈ ದಿನದಂದು ಮನೆಯನ್ನು ಸ್ವಚ್ಛಗೊಳಿಸಿ ದೇವರಿಗೆ ವಿಶೇಷ ಪೂಜೆಗಳನ್ನು ಮಾಡುತ್ತಾರೆ, ಮನೆಯವರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಮನೆಯನ್ನು ಮಾವಿನ ತೋರಣದಿಂದ ಅಲಂಕರಿಸುತ್ತಾರೆ. ಮನೆಯಲ್ಲಿ ಪಾಯಸ, ಹೋಳಿಗೆ ಮುಂತಾದ ಸಿಹಿ ತಿಂಡಿಗಳನ್ನೊಳಗೊಂಡ ಹಬ್ಬದ ಅಡುಗೆಯನ್ನು ಮಾಡುತ್ತಾರೆ. ಇಂದು ಕೆಟ್ಟದ್ದು ನಾಶವಾಗಿ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ.