
ವಿಡಿಯೋದಲ್ಲಿ ವೀರೇಂದ್ರ ಕುಮಾರ್ ಎಂಬ ಯುವಕ ಬಿಜೆಪಿ ಕಾರ್ಯಕರ್ತರು ಮತದಾರರ ಬೆರಳಿಗೆ ಶಾಯಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜನರಿಗೆ ಹಣ ತೆಗೆದುಕೊಂಡು ಮತ ಹಾಕಬೇಡಿ ಎಂದು ಕೇಳಿಕೊಳ್ಳುತ್ತಾರೆ. ಇದರಲ್ಲಿ ಭಾಗಿಯಾಗಿರುವ ಬಿಜೆಪಿ ಕಾರ್ಯಕರ್ತರ ಹೆಸರನ್ನೂ ಅವರು ಬಹಿರಂಗಪಡಿಸಿದ್ದಾರೆ.
ಆ ವಿಡಿಯೋದ ನಂತರದ ಭಾಗದಲ್ಲಿ, ಬಿಳಿ ಬಣ್ಣದ ಉಡುಪು ಧರಿಸಿರುವ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಬಿಜೆಪಿ ಅಭ್ಯರ್ಥಿ ಮಹೇಂದ್ರ ಪಾಂಡೆ ಮತ್ತು ಅವರ ಬೆಂಬಲಿಗರು ಲಂಚ ನೀಡಿ ಹಳ್ಳಿಗಳಲ್ಲಿ ಮತಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೊನೆಗೆ ಒಬ್ಬ ಹಿರಿಯ ಮಹಿಳೆ ಕೂಡ ಇದನ್ನೇ ಪುನರುಚ್ಛರಿಸಿದ್ದಾರೆ.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ವ್ಯಂಗ್ಯಭರಿತ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಯುಪಿ ಚುನಾವಣೆಯ ಹ್ಯಾಶ್‌ಟ್ಯಾಗ್‌ಗಳ ಜೊತೆಗೆ ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ.
ಈ ಸಂಬಂಧ ಸತ್ಯಾಸತ್ಯತೆಯನ್ನು ಕಂಡುಹಿಡಿಯಲಾಗಿದ್ದು, ಈ ಘಟನೆ ಸುಮಾರು ಮೂರು ವರ್ಷಗಳ ಹಿಂದೆ ನಡೆದಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.
ಎಎಫ್‍ಡಬ್ಲ್ಯೂಎ ತನಿಖೆ
ವಿಡಿಯೋದಲ್ಲಿ ಒಬ್ಬ ವ್ಯಕ್ತಿಯೂ ಮಾಸ್ಕ್ ಧರಿಸಿಲ್ಲ ಎಂಬುದನ್ನು ಗಮನಿಸಬಹುದು. ಸುಮಾರು ಒಂದು ನಿಮಿಷ ಇರೋ ವಿಡಿಯೋ ದೃಶ್ಯಾವಳಿಯಲ್ಲಿ ಒಬ್ಬರೇ ಒಬ್ಬ ಪೊಲೀಸ್ ಕೂಡ ಕಂಡು ಬಂದಿಲ್ಲ. ಹೀಗಾಗಿ ಈ ಘಟನೆಯ ಸಮಯ ಮತ್ತು ಸ್ಥಳವನ್ನು ಕಂಡುಹಿಡಿಯಲು ಹೆಸರಾಂತ ಮಾಧ್ಯಮವೊಂದು ಒಂದೆರಡು ಕೀವರ್ಡ್ ಹುಡುಕಾಟಗಳನ್ನು ನಡೆಸಿತು.
ಮೇ 19, 2019 ರಂದು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ʼದಿ ಎಕನಾಮಿಕ್ ಟೈಮ್ಸ್ʼ ಪ್ರಕಟಿಸಿದ ವಿಡಿಯೋ ವರದಿ ಈ ವೇಳೆ ನೆನಪಾಗಿದೆ. ತಾರಾ ಜೀವನ್‌ಪುರ ಗ್ರಾಮದ ನಿವಾಸಿಗಳು ಬಿಜೆಪಿಯವರು ಬಲವಂತವಾಗಿ ಶಾಯಿ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ವರದಿ ಪ್ರಕಾರ, ಈ ಘಟನೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ನಡೆದಿದೆ.
ಮೇ 19, 2019 ರಂದು ವೆಬ್‌ಸೈಟ್ ವೊಂದು ವಿಡಿಯೋ ವರದಿಯನ್ನು ಪ್ರಕಟಿಸಿತ್ತು. ಚಂದೌಲಿಯ ತಾರಜೀವನಪುರ ಗ್ರಾಮದ ದಲಿತ ಪ್ರಾಬಲ್ಯದ ಕೊಳೆಗೇರಿಯ ಜನರು ಬಿಜೆಪಿ ಕಾರ್ಯಕರ್ತರು ತಮಗೆ ಲಂಚ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ವರದಿ ಮಾಡಲಾಗಿತ್ತು. ಮತದಾನ ಮಾಡದಿದ್ದಕ್ಕೆ ನಿವಾಸಿಗಳಿಗೆ ತಲಾ 500 ರೂ. ನೀಡಿ ಪಕ್ಷದ ಕಾರ್ಯಕರ್ತರು ಬೆರಳಿಗೆ ಶಾಯಿಯನ್ನೂ ಹಾಕಿದ್ದಾರೆ ಎಂಬ ಆರೋಪವಿತ್ತು.
ಉತ್ತರ ಪ್ರದೇಶ ಪೊಲೀಸರ ಅಧಿಕೃತ ಫ್ಯಾಕ್ಟ್ ಚೆಕ್ ಹ್ಯಾಂಡಲ್ ನಲ್ಲಿ ಈ ಆರೋಪವನ್ನು ನಿರಾಕರಿಸಿದೆ. ಆದ್ದರಿಂದ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಮೂರು ವರ್ಷಗಳ ಹಳೆಯ ವಿಡಿಯೋವನ್ನು ತಪ್ಪಾಗಿ ಪ್ರಸಾರ ಮಾಡಿರುವುದು ಸ್ಪಷ್ಟವಾಗಿದೆ ಎಂದು ಹೇಳಲಾಗಿದೆ.