ದಿನಾ ಬೆಳಗ್ಗಿನ ತಿಂಡಿಯದ್ದೇ ಚಿಂತೆ ಕಾಡುತ್ತಿದೆಯಾ…? ಉಪ್ಪಿಟ್ಟು, ರೈಸ್ ಬಾತ್ ತಿಂದು ಬೇಸರವಾದವರು ಒಮ್ಮೆ ಈ ತೊಗರಿಬೇಳೆ ದೋಸೆ ಮಾಡಿಕೊಂಡು ಸವಿದುನೋಡಿ. ಬೇಳೆಕಾಳುಗಳು ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು:
1 ಕಪ್- ಇಡ್ಲಿ ಅಕ್ಕಿ, ½ ಕಪ್- ತೊಗರಿಬೇಳೆ, 1 ಟೇಬಲ್ ಸ್ಪೂನ್-ಉದ್ದಿನಬೇಳೆ, 1 ಇಂಚು-ಶುಂಠಿ, 3-ಒಣಮೆಣಸು, ನೀರು-ಅಗತ್ಯವಿರುವಷ್ಟು, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-ಸ್ವಲ್ಪ, ½ ಟೀ ಸ್ಪೂನ್ -ಸಾಸಿವೆ, ½ ಟೀ ಸ್ಪೂನ್-ಜೀರಿಗೆ, 2 ಟೇಬಲ್ ಸ್ಪೂನ್ ಕರಿಬೇವು (ಸಣ್ಣಗೆ ಹಚ್ಚಿದ್ದು), 1 ಕಪ್- ಈರುಳ್ಳಿ ಸಣ್ಣಗೆ ಹಚ್ಚಿದ್ದು, ಚಿಟಿಕೆ-ಇಂಗು.
ಮಾಡುವ ವಿಧಾನ:
ಒಂದು ಪಾತ್ರೆಗೆ ಅಕ್ಕಿ, ಉದ್ದಿನಬೇಳೆ, ತೊಗರಿಬೇಳೆ, ಒಣಮೆಣಸು ಹಾಕಿ ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಸಿಡಿ. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿಕೊಂಡು ರುಬ್ಬಿಕೊಳ್ಳಿ. ಹಿಟ್ಟು ಸ್ವಲ್ಪ ತೆಳುವಾಗಿರಲಿ.
ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು, ಈರುಳ್ಳಿ, ಇಂಗು ಹಾಕಿ ಮಿಕ್ಸ್ ಮಾಡಿ. ಈರುಳ್ಳಿ ಕೆಂಪಗಾದ ಬಳಿಕ ಗ್ಯಾಸ್ ಆಫ್ ಮಾಡಿ ಇದು ತಣ್ಣಗಾದ ಬಳಿಕ ದೋಸೆ ಹಿಟ್ಟಿಗೆ ಸೇರಿಸಿ ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ದೋಸೆ ಹಿಟ್ಟು ರವಾ ದೋಸೆ ಹಿಟ್ಟಿನ ಹದಕ್ಕೆ ಇರಲಿ. ನಂತರ ಗ್ಯಾಸ್ ಮೇಲೆ ತವಾ ಇಟ್ಟು ತುಸು ಎಣ್ಣೆ ಸವರಿ ದೋಸೆ ಮಾಡಿಕೊಳ್ಳಿ. ಇದನ್ನು ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಂಡು ಚಟ್ನಿ ಜತೆ ಸವಿಯಿರಿ.