ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಏನಾದರೂ ತಿನ್ನಬೇಕಿನಿಸಿದರೆ, ಆಲೂ ಬಜ್ಜಿ ಮಾಡಿ ನೋಡಿ. ಸುಲಭವಾಗಿ ಮಾಡಬಹುದಾದ ಆಲೂಬಜ್ಜಿಯ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಸಣ್ಣ ಗಾತ್ರದ ಆಲೂಗಡ್ಡೆ- ಅರ್ಧ ಕೆ.ಜಿ., ಕಡಲೆ ಹಿಟ್ಟು -100 ಗ್ರಾಂ, ಅರಿಶಿಣ ಪುಡಿ- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಮೆಣಸಿನ ಪುಡಿ- 1 ಚಮಚ, ಧನಿಯಾ ಪುಡಿ-1 ಚಮಚ, ಅಡುಗೆ ಸೋಡಾ- ಸ್ವಲ್ಪ ಹಾಗೂ ಕರಿಯಲು ತಕ್ಕಷ್ಟು ಎಣ್ಣೆ.
ಮಸಾಲೆಗೆ ಬೇಕಾದ ಪದಾರ್ಥ:
ಬೆಳ್ಳುಳ್ಳಿ-5 ಎಸಳು, ಮೆಣಸಿನ ಪುಡಿ- 2 ಚಮಚ, ಜೀರಿಗೆ ಪುಡಿ- 2 ಚಮಚ, ಜೊತೆಗೆ ಸ್ವಲ್ಪ ಉಪ್ಪು.
ತಯಾರಿಸುವ ವಿಧಾನ:
ಮೊದಲಿಗೆ ಆಲೂಗಡ್ಡೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು ಒಂದು ಪಾತ್ರೆಯಲ್ಲಿ ನೀರು ಹಾಕಿ ಬೇಯಿಸಿಕೊಳ್ಳಿ.
ಆಲೂಗಡ್ಡೆ ಬೆಂದ ನಂತರ, ಸಿಪ್ಪೆಯನ್ನು ಸುಲಿದು, ಚಾಕುವಿನಿಂದ ಮೇಲ್ಭಾಗದಲ್ಲಿ ಸೀಳು ಮಾಡಿ, ಅದಕ್ಕೆ ಬೆಳ್ಳುಳ್ಳಿ, ಜೀರಿಗೆ ಪುಡಿ, ಉಪ್ಪು, ಮೆಣಸಿನ ಪುಡಿಯಿಂದ ಮಾಡಿದ ಪೇಸ್ಟ್ ಅನ್ನು ತುಂಬಿರಿ.
ಕಡಲೆಹಿಟ್ಟಿಗೆ ಅರಿಶಿನ ಪುಡಿ, ಮೆಣಸಿನ ಪುಡಿ, ಧನಿಯಾ ಪುಡಿ, ಅಡುಗೆ ಸೋಡಾ ಮತ್ತು ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.
ಬಾಣಲಿಯಲ್ಲಿ ಎಣ್ಣೆಯನ್ನು ಹಾಕಿ ಒಲೆಯ ಮೇಲೆ ಇಡಿ. ಎಣ್ಣೆ ಕಾದ ಬಳಿಕ ಆಲೂಗಡ್ಡೆಯನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ. ಕೆಂಪಗೆ ಬೆಂದ ಬಳಿಕ ಜಾಲರಿಯಿಂದ ತೆಗೆಯಿರಿ. ಬಿಸಿಯಾಗಿರುವಾಗಲೇ ರುಚಿಯನ್ನು ನೋಡಿ.