ಎಲೆಕ್ಟ್ರಿಕ್ ವಾಹನಗಳಲ್ಲಿ ಅಗ್ನಿ ಅನಾಹುತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯನ್ನು ಕೆಲ ಕಾಲ ಮುಂದೂಡುವಂತೆ ವಾಹನ ತಯಾರಿಕಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ವಾಹನ ತಯಾರಿಕಾ ಸಂಸ್ಥೆಗಳು ಹತ್ತಾರು ಬಗೆಯ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾ ಬಂದಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ವಾಹನಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಅನಾಹುತಗಳು ಸಂಭವಿಸುತ್ತಿರುವ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ತಮ್ಮ ಹೊಸ ದ್ವಿಚಕ್ರ ವಾಹನಗಳ ಬಿಡುಗಡೆ ಯೋಜನೆಗಳನ್ನು ಮುಂದೂಡುವಂತೆ ವಾಹನ ತಯಾರಿಕಾ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಒಂದು ವೇಳೆ ವಾಹನದಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಅದರೊಂದಿಗೆ ತಯಾರಿಸಲಾದ ಎಲ್ಲಾ ವಾಹನಗಳನ್ನು ಹಿಂಪಡೆದುಕೊಳ್ಳುವಂತೆ ಆದೇಶ ನೀಡಲಾಗಿದೆ. ಅಲ್ಲದೇ, ಈ ಅಗ್ನಿ ಅವಘಡ ಪ್ರಕರಣಗಳ ಕುರಿತು ತನಿಖೆ ನಡೆಸಿ ಅದರ ವರದಿ ಆಧಾರದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.