ಮನೆಗೆ ಯಾರಾದರೂ ಬಂದಾಗ ಅಥವಾ ಭಾನುವಾರದಂದು ಎಲ್ಲರೂ ಮನೆಯಲ್ಲಿ ಒಟ್ಟು ಸೇರಿದಾಗ ಊಟಕ್ಕೆ ಮಾಡಿ ಈ ಹೈದ್ರಾಬಾದ್ ಎಗ್ ಬಿರಿಯಾನಿ. ಮಾಡುವುದಕ್ಕೂ ಸುಲಭವಿದೆ. ರುಚಿ ಕೂಡ ತುಂಬಾ ಚೆನ್ನಾಗಿ ಇರುತ್ತದೆ.
ಬೇಕಾಗುವ ಸಾಮಗ್ರಿಗಳು:
ಪಲಾವ್ ಎಲೆ – 1/2, ಚಕ್ಕೆ – 1 ಚಿಕ್ಕ ಪೀಸ್, ಲವಂಗ – 3, ಏಲಕ್ಕಿ – 2, ಟೊಮೆಟೊ – 1 (ಚಿಕ್ಕದಾಗಿ ಕತ್ತರಿಸಿಕೊಂಡಿದ್ದು), ಮೊಸರು – 2 ಟೇಬಲ್ ಸ್ಪೂನ್, ಬಾಸುಮತಿ ಅಕ್ಕಿ – 2 ಕಪ್, ಬಿರಿಯಾನಿ ಮಸಾಲ – 1 ಟೇಬಲ್ ಸ್ಪೂನ್, ಖಾರದ ಪುಡಿ – 1 ಟೀ ಸ್ಪೂನ್, ತುಪ್ಪ – 2 ಟೇಬಲ್ ಸ್ಪೂನ್, ಪುದೀನಾ – ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದು 2 ಟೇಬಲ್ ಸ್ಪೂನ್, ಗೋಡಂಬಿ – 4, ಎಣ್ಣೆ – 5 ಟೇಬಲ್ ಸ್ಪೂನ್, ಗಸಗಸೆ – 1/2 ಟೇಬಲ್ ಸ್ಪೂನ್, ತೆಂಗಿನಕಾಯಿ ತುರಿ – 2 ಟೇಬಲ್ ಸ್ಪೂನ್, ಬೆಳ್ಳುಳ್ಳಿ – 4 ಎಸಳು, ಶುಂಠಿ – 1/2 ಇಂಚು, ಹಸಿಮೆಣಸು – 4, ಕೊತ್ತಂಬರಿ ಸೊಪ್ಪು – ಸ್ವಲ್ಪ.
ಎಗ್ ಮಸಾಲಕ್ಕೆ ಬೇಕಿರುವ ಸಾಮಾಗ್ರಿಗಳು ಹೀಗಿವೆ:
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್, ಖಾರದಪುಡಿ – 2 ಟೀ ಸ್ಪೂನ್, ಕಾಳುಮೆಣಸಿನ ಪುಡಿ – 1 ಟೀ ಸ್ಪೂನ್, ಕಡಲೆಹಿಟ್ಟು – 2ಟೇಬಲ್ ಸ್ಪೂನ್, ಉಪ್ಪು – 2 ಟೀ ಸ್ಪೂನ್, ಮೊಟ್ಟೆ – 4.
ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು ½ ಗಂಟೆಗಳ ಕಾಲ ನೆನೆಸಿಕೊಳ್ಳಿ. ಇನ್ನು ಎಗ್ ಮಸಾಲಕ್ಕೆ ಬೇಕಿರುವ ಸಾಮಾಗ್ರಿಗಳನ್ನೆಲ್ಲಾ ತೆಗೆದುಕೊಂಡು ಒಂದು ಬೌಲ್ ಗೆ ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ಹದ ದಪ್ಪಕ್ಕೆ ಪೇಸ್ಟ್ ಮಾಡಿಕೊಂಡು ಅದಕ್ಕೆ ಬೇಯಿಸಿದ ಮೊಟ್ಟೆ ಹಾಕಿ ಮಿಕ್ಸ್ ಮಾಡಿ.
ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ಬಿಸಿಯಾಗುತ್ತಲೆ ಮಸಾಲೆ ಹಚ್ಚಿದ ಮೊಟ್ಟೆಯನ್ನು ಹಾಕಿ ಸ್ವಲ್ಪ ಫ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ. ನಂತರ ಒಂದು ಮಿಕ್ಸಿ ಜಾರಿಗೆ ಶುಂಠಿ ಬೆಳ್ಳುಳ್ಳಿ, ಪುದೀನಾ, ಕೊತ್ತಂಬರಿ ಸೊಪ್ಪು, ಗೋಡಂಬಿ, ತೆಂಗಿನಕಾಯಿ ತುರಿ, ಗಸಗಸೆ, ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.
ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 3 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ನಂತರ ಅದಕ್ಕೆ ಟೊಮೆಟೊ ಸೇರಿಸಿ ಅದು ಮೆತ್ತಗಾದ ಮೇಲೆ ರುಬ್ಬಿಕೊಂಡ ಮಸಾಲ ಸೇರಿಸಿ ಸ್ವಲ್ಪ ಹೊತ್ತು ಫ್ರೈ ಮಾಡಿ ಮೊಸರು, ಖಾರದ ಪುಡಿ, ಬಿರಿಯಾನಿ ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಅದಕ್ಕೆ ಅಕ್ಕಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, 4 ಕಪ್ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪ್ಯಾನ್ ಗೆ ಒಂದು ಮುಚ್ಚಳ ಮುಚ್ಚಿ ಹದ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಮೊಟ್ಟೆಯನ್ನು ಸೇರಿಸಿಕೊಂಡು ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ 5 ನಿಮಿಷಗಳ ಸಣ್ಣ ಉರಿಯಲ್ಲಿ ಬೇಯಿಸಿಕೊಂಡರೆ ರುಚಿಕರವಾದ ಹೈದ್ರಾಬಾದ್ ಎಗ್ ಬಿರಿಯಾನಿ ಸವಿಯಲು ಸಿದ್ಧ.