ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ವಿಧಾನಸೌಧದಲ್ಲಿ ಇದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಈವರೆಗೆ 9 ಮಂದಿ ಸಾಧಕರಿಗೆ ಕರ್ನಾಟಕದ ಅತ್ಯುನ್ನತ ಪುರಸ್ಕಾರವಾದ ‘ಕರ್ನಾಟಕ ರತ್ನ’ ಪ್ರದಾನ ಮಾಡಲಾಗಿದ್ದು, ಇಂದು ಪುನೀತ್ ರಾಜಕುಮಾರ್ ಅವರಿಗೆ ನೀಡಲಾಗುತ್ತಿದೆ.
ಪುನೀತ್ ರಾಜಕುಮಾರ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ‘ಕರ್ನಾಟಕ ರತ್ನ’ ಪ್ರಶಸ್ತಿ ಸ್ವೀಕರಿಸಲಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಖ್ಯಾತ ನಟರುಗಳಾದ ರಜನಿಕಾಂತ್, ಜೂನಿಯರ್ ಎನ್ಟಿಆರ್ ಹಾಗೂ ರಾಜಕುಮಾರ್ ಕುಟುಂಬ ಸದಸ್ಯರು ಹಾಜರಿರಲಿದ್ದಾರೆ.
1992 ರಲ್ಲಿ ಅಂದಿನ ಮುಖ್ಯಮಂತ್ರಿ ಆಗಿದ್ದ ಎಸ್. ಬಂಗಾರಪ್ಪನವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಆರಂಭಿಸಿದ್ದು, ರಾಷ್ಟ್ರಕವಿ ಕುವೆಂಪು ಹಾಗೂ ವರನಟ ಡಾ. ರಾಜಕುಮಾರ್ ಅವರಿಗೆ ಅಂದು ಪ್ರಧಾನ ಮಾಡಲಾಗಿತ್ತು.
ಆ ಬಳಿಕ ಎಸ್. ನಿಜಲಿಂಗಪ್ಪ (1999), ಸಿ.ಎನ್.ಆರ್. ರಾವ್ (2000), ದೇವಿಪ್ರಸಾದ್ ಶೆಟ್ಟಿ (2001), ಭೀಮಸೇನ್ ಜೋಶಿ (2005), ಶ್ರೀ ಶಿವಕುಮಾರ ಸ್ವಾಮಿಗಳು (2007), ಡಾ. ಡಿ. ಜವರೇಗೌಡ (2018) ಹಾಗೂ ಡಾ. ವೀರೇಂದ್ರ ಹೆಗಡೆ (2009) ಈವರೆಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದ ಗಣ್ಯರಾಗಿದ್ದಾರೆ.