2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನಕ್ಕೆ ಅಡಿಗಲ್ಲು ಹಾಕಿದ್ದು, ಇದು 2022ರ ಚಳಿಗಾಲದ ಅಧಿವೇಶನಕ್ಕೆ ಮೊದಲೇ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದು ಆರಂಭವಾದ ಬಳಿಕ ಇಲ್ಲಿಯೇ ಕಲಾಪ ನಡೆಯಲಿದೆ ಎನ್ನಲಾಗುತ್ತಿದ್ದು, ಹಳೆ ಸಂಸತ್ ಭವನ ಇತಿಹಾಸದ ಪುಟ ಸೇರಲಿದೆ.
ಹಳೆ ಸಂಸತ್ ಭವನದ ಕೆಲವೊಂದು ವಿಶೇಷತೆಗಳು ಇಲ್ಲಿವೆ. ಹಳೆ ಸಂಸತ್ ಭವನವನ್ನು 1927ರಲ್ಲಿ ಉದ್ಘಾಟಿಸಲಾಗಿದ್ದು, ಇದಕ್ಕೆ 95 ವರ್ಷಗಳ ಸುದೀರ್ಘ ಇತಿಹಾಸವಿದೆ. ಬ್ರಿಟನ್ ದೊರೆ ಐದನೇ ಜಾರ್ಜ್ ಕಾಲದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.
ಸ್ವಾತಂತ್ರ್ಯ ಘೋಷಣೆ, ಸಂವಿಧಾನ ರಚನೆ ಇದೆ ಭವನದಲ್ಲಿ ನಡೆದಿದ್ದು, ದೇಶದ ಹೆಗ್ಗುರುತಾಗಿರುವ ಹಾಲಿ ಸಂಸತ್ ಭವನದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹಲವು ಮಹನೀಯರ ಹೆಜ್ಜೆ ಗುರುತುಗಳಿವೆ. 6 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಈ ಸಂಸತ್ ಕಟ್ಟಡವಿದೆ.
1927 ಫೆಬ್ರವರಿ 12ರಂದು ಈ ಸಂಸತ್ ಕಟ್ಟಡವನ್ನು ಐದನೇ ಜಾರ್ಜ್ ಉದ್ಘಾಟಿಸಿದ್ದರು. ದೇಶ ಸ್ವಾತಂತ್ರ್ಯ ಪಡೆದ ಬಳಿಕ ಇದರ ಮೇಲ್ಭಾಗದಲ್ಲಿ ಹಾರಾಡುತ್ತಿದ್ದ ಬ್ರಿಟಿಷ್ ಧ್ವಜವನ್ನು ತೆಗೆದು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು.