ಬಹು ನಿರೀಕ್ಷಿತ ಬೆಂಗಳೂರು – ಮೈಸೂರು ದಶಪಥಗಳ ಹೆದ್ದಾರಿಯ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯದಲ್ಲಿ ಇಂದು ನೆರವೇರಿಸಲಿದ್ದಾರೆ. ರಾಜ್ಯದ ಮೊದಲ ನಿಯಂತ್ರಿತ ಎಕ್ಸ್ ಪ್ರೆಸ್ ವೇ ಎಂಬ ಖ್ಯಾತಿ ಈ ಹೆದ್ದಾರಿಗಿದ್ದು, ಬೆಂಗಳೂರು – ಮೈಸೂರು ನಡುವೆ ಸಂಚರಿಸುವವರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿದಂತಾಗುತ್ತದೆ.
ಈ ಎಕ್ಸ್ ಪ್ರೆಸ್ ವೇ ಹಲವು ವಿಶೇಷತೆಗಳಿಂದ ಕೂಡಿದ್ದು, ರಾಜ್ಯದ ಮೊದಲ ಆಕ್ಸಿಸ್ ಕಂಟ್ರೋಲ್ಡ್ ಹೈವೇ ಎಂಬ ಹೆಗ್ಗಳಿಕೆ ಇದಕ್ಕಿದೆ. ಅಲ್ಲದೆ ಹೆದ್ದಾರಿಯಲ್ಲಿಯೇ ಹೆಲಿಕಾಪ್ಟರ್ ಕೂಡ ಇಳಿಯಬಹುದಾಗಿದ್ದು, ಎರಡು ಬದಿಗಳಲ್ಲಿ ಏಳು ಅಡಿ ಎತ್ತರದ ತಂತಿಬೆಲೆ ನಿರ್ಮಿಸಲಾಗಿದೆ. ಜೊತೆಗೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಈ ಎಕ್ಸ್ ಪ್ರೆಸ್ ವೇ ಉದ್ಘಾಟನೆ ಬಳಿಕ ಬೆಂಗಳೂರು – ಮೈಸೂರು ನಡುವಿನ ಪ್ರಯಾಣದ ಅವಧಿ 3 ಗಂಟೆಯಿಂದ ಸರಾಸರಿ 90 ನಿಮಿಷಕ್ಕೆ ಇಳಿಕೆಯಾಗಲಿದ್ದು, ಜೊತೆಗೆ 52 ಕಿ.ಮೀ. ಉದ್ದದ ಹೊಸ ಬೈಪಾಸ್ ರಸ್ತೆ ನಿರ್ಮಾಣವಾಗಿರುವ ಕಾರಣ ನಗರಗಳಲ್ಲಿನ ಸಂಚಾರ ದಟ್ಟಣೆಯೂ ಸಹ ಕಡಿಮೆಯಾಗಲಿದೆ.
ಈ ಹಿಂದೆ ಫೆಬ್ರವರಿ 28 ರಿಂದಲೇ ಹೆದ್ದಾರಿಯ ಕಣಮಿಣಕಿ ಹಾಗೂ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದ ಹೆದ್ದಾರಿ ಪ್ರಾಧಿಕಾರ ಅದನ್ನು ಮಾರ್ಚ್ 14ಕ್ಕೆ ಮುಂದೂಡಿದ್ದು, ಆದರೆ ಸರ್ವಿಸ್ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡು ಮೂಲಸೌಕರ್ಯವನ್ನು ಕಲ್ಪಿಸುವವರೆಗೂ ಟೋಲ್ ಶುಲ್ಕ ವಿಧಿಸಬಾರದು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.