ಭಾರತ ಕ್ರಿಕೆಟ್ ತಂಡದ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾದ ಮಾಜಿ ನಾಯಕ ಅನಿಲ್ ಕುಂಬ್ಳೆ ತಮ್ಮ ಜೀವನದ 52 ವಸಂತಗಳನ್ನು ಪೂರೈಸಿದ್ದಾರೆ. ಭಾರತ ಕ್ರಿಕೆಟ್ ಇತಿಹಾಸದ ಅತಿ ದೊಡ್ಡ ಮ್ಯಾಚ್ ವಿನ್ನರ್‌ಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಜಂಬೋಗೆ ದೇಶವಾಸಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ಜಂಟಲ್‌ಮನ್‌ಗಳ ಆಟದ ಪರ್ಫೆಕ್ಟ್ ಜಂಟಲ್‌ಮನ್ ಆಗಿರುವ ಕುಂಬ್ಳೆ ಭಾರತ ತಂಡದ ಪರ ಅತ್ಯಮೋಘ ಪ್ರದರ್ಶನ ನೀಡಿ, ತಮ್ಮ ಲೆಗ್ ಸ್ಪಿನ್ ಜಾಲದಿಂದ ಎದುರಾಳಿಗಳನ್ನು ಕಟ್ಟಿಹಾಕಿ ಸ್ಮರಣೀಯ ಗೆಲುವುಗಳನ್ನು ತಂದಿತ್ತಿದ್ದಾರೆ. ಇವುಗಳ ಪೈಕಿ, ಜಂಬೋ ಶ್ರೇಷ್ಠ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದಿಟ್ಟ ಕೆಲವೊಂದು ವಿಡಿಯೋಗಳ ಲಿಂಕ್ ಇಲ್ಲಿವೆ.
ಹೀರೋ ಕಪ್ 1993: ಹೀರೋ ಕಪ್ ಫೈನಲ್
ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ 12 ರನ್ನಿತ್ತು ಆರು ವಿಕೆಟ್ ಪಡೆದ ಕುಂಬ್ಳೆ ಪಂದ್ಯದ ದಿಕ್ಕನ್ನೇ ಬದಲಿಸಿ ಭಾರತಕ್ಕೆ ದೊಡ್ಡ ಗೆಲುವು ತಂದಿತ್ತಿದ್ದರು. 225 ರನ್‌ಗಳ ಟಾರ್ಗೆಟ್ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ತಂಡ ಒಂದು ಹಂತದಲ್ಲಿ 101/4 ಸ್ಕೋರ್ ಮಾಡಿತ್ತು. ಕಾರ್ಲ್ ಹೂಪರ್ ಸೇರಿದಂತೆ ಇನ್ನೂ ಆರು ಮಂದಿ ಬ್ಯಾಟ್ಸ್‌ಮನ್ ಇದ್ದರೂ ಸಹ ಕುಂಬ್ಳೆ ದಾಳಿಗೆ ತತ್ತರಿಸಿದ್ದ ವಿಂಡೀಸ್ 123 ರನ್‌ಗೆ ಆಲೌಟ್ ಆಗಿತ್ತು.
ಪರ್ಫೆಕ್ಟ್ 10
ಅನಿಲ್ ಕುಂಬ್ಳೆ ಹೆಸರು ಕೇಳಿದೊಡನೆಯೇ ನೆನಪಾಗುವ ಪ್ರದರ್ಶನ ಇದು. 1999ರಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ಕಡು ವೈರಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ಎದುರಾಳಿಯ ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆದ ಕುಂಬ್ಳೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇಂಗ್ಲೆಂಡ್‌ನ ಜಿಮ್ ಲೇಕರ್ ಬಿಟ್ಟರೆ ಈ ಸಾಧನೆಗೈದ ಏಕೈಕ ಬೌಲರ್ ಆಗಿದ್ದಾರೆ.
ಪಂದ್ಯದಲ್ಲಿ 420 ರನ್‌ಗಳ ಟಾರ್ಗೆಟ್ ಚೇಸ್ ಮಾಡುತ್ತಿದ್ದ ಪಾಕ್, ಒಂದು ಹಂತದಲ್ಲಿ 101/0 ಸ್ಕೋರ್ ಮಾಡಿ ಸುಸ್ಥಿತಿಯಲ್ಲಿತ್ತು. ನೋಡನೋಡುತ್ತಿದ್ದಂತೆಯೇ ಒಂದೊಂದೇ ವಿಕೆಟ್‌ಗಳನ್ನು ತಮ್ಮ ಅತ್ಯಮೋಘ ವೇರಿಯೇಷನ್‌ಗಳ ಮೂಲಕ ಪಾಕ್ ಬ್ಯಾಟ್ಸ್‌ಮನ್‌ಗಳ ಕಂಗೆಡಿಸಿದ ಕುಂಬ್ಳೆ ಪಂದ್ಯವನ್ನು ಭಾರತದ ಕಡೆಗೆ ವಾಲಿಸಿದ್ದರು.
ಆಂಟಿಗಾ 2002
ಎಲ್ಲ ಕ್ಷೇತ್ರಗಳಲ್ಲೂ ಶ್ರೇಷ್ಠ ಸಾಧಕರು ಇದ್ದೇ ಇರುತ್ತಾರೆ. ಆದರೆ ಕೆಲವರು ಬರೀ ಶ್ರೇಷ್ಠ ಸಾಧನೆಗೆ ಬೇಕಾಗಿದ್ದಕ್ಕಿಂತಲೂ ದೊಡ್ಡ ಮಟ್ಟದ ಬದ್ಧತೆ ತೋರುವ ಮೂಲಕ ಸಾರ್ವಕಾಲಿಕ ಶ್ರೇಷ್ಠರಾಗುತ್ತಾರೆ. ಇಂಥವರ ಸಾಲಿಗೆ ಅರ್ಹವಾಗಿಯೇ ಸೇರುವ ಅನಿಲ್ ಕುಂಬ್ಳೆ ತಾವಾಡಿದ ಟೆಸ್ಟ್ ಮ್ಯಾಚ್‌ಗಳಲ್ಲಿ ಪಡೆದ 5/10 ವಿಕೆಟ್ ಗೊಂಚಲಿಗಿಂತ ವಿಶಿಷ್ಟವಾದ ಕಾರಣಕ್ಕೆ ಈ ಒಂದು ಪಂದ್ಯದಲ್ಲಿ ಕ್ರಿಕೆಟ್ ಪ್ರಿಯರ ಹೃದಯ ಗೆದ್ದಿದ್ದರು.
ವೆಸ್ಟ್ ಇಂಡೀಸ್ ವಿರುದ್ಧ ಆಂಟಿಗಾದಲ್ಲಿ ನಡೆದ ಟೆಸ್ಟ್ ಸರಣಿಯ ಮೂರನೇ ಪಂದ್ಯ…….ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆಡುತ್ತಿದ್ದ ಅನಿಲ್ ಕುಂಬ್ಳೆಗೆ ವೇಳೆ ವಿಂಡೀಸ್ ವೇಗಿ ಮರ್ವಿನ್ ಧಿಲ್ಲಾನ್ ಬೌನ್ಸರ್ ಒಂದು ಗಲ್ಲಕ್ಕೆ ಬಡಿದ ಕಾರಣ ಅವರು ಗಾಯಗೊಂಡು ನಿವೃತ್ತರಾಗುತ್ತಾರೆ. ಬಳಿಕ ವೆಸ್ಟ್ ಇಂಡೀಸ್ ಬ್ಯಾಟ್ ಮಾಡುವ ವೇಳೆ, ಭಾರತೀಯ ವೇಗಿಗಳನ್ನು ಗೋಳು ಹೊಯ್ದುಕೊಂಡ ವಿಂಡೀಸ್ ಬ್ಯಾಟ್ಸ್‌ಮನ್‌ಗಳು ಎರಡು ದಿನಕ್ಕೂ ಹೆಚ್ಚಿನ ಅವಧಿಗೆ ಬ್ಯಾಟ್ ಮಾಡುತ್ತಾರೆ.
ತಮ್ಮ ತಂಡದ ಬೌಲರ್‌ಗಳ ಪರದಾಟ ನೋಡಿದ ಕಂಬ್ಳೆ, ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡೇ ಅಂಗಳಕ್ಕಿಯುತ್ತಾರೆ. ಆ ನೋವಿನ ನಡುವೆಯೂ 14 ಓವರ್ ಬೌಲ್ ಮಾಡಿದ ಕುಂಬ್ಳೆ, 29 ರನ್ನಿತ್ತು ಬ್ರಯಾನ್ ಲಾರಾರ ವಿಕೆಟ್ ಪಡೆಯುವ ಮೂಲಕ ಆಟದ ಮೇಲಿನ ತಮ್ಮ ಅತೀವವಾದ ಬದ್ಧತೆಯ ಕಾರಣದಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೂ ಸ್ಪೂರ್ತಿಯಾಗಿದ್ದಾರೆ.
ಮುಲ್ತಾನ್ 2004
ಪಾಕಿಸ್ತಾನ ವಿರುದ್ಧ ಅದರದ್ದೇ ನೆಲದಲ್ಲಿ 15 ವರ್ಷಗಳ ಬಳಿಕ ಆಡಿದ ಮೊದಲ ಟೆಸ್ಟ್ ಪಂದ್ಯ ಇದು. ಮುಲ್ತಾನ್‌ನಲ್ಲಿ ನಡೆದ ಈ ಪಂದ್ಯವು ವೀರೇಂದ್ರ ಸೆಹ್ವಾಗ್‌ರ ತ್ರಿಶತಕ ಕಾರಣದಿಂದ ಎಲ್ಲರಿಗೂ ನೆನಪಿದೆ. ಮೊದಲ ಇನಿಂಗ್ಸ್‌ನಲ್ಲಿ 675ರನ್‌ಗಳ ಬೃಹತ್ ಮೊತ್ತ ಪೇರಿಸಿ ಪಾಕ್ ವಿರುದ್ಧ ಇನಿಂಗ್ಸ್ ಗೆಲುವು ಪಡೆದ ಭಾರತದ ಪರವಾಗಿ ಪಾಕ್‌ನ ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್ ಪಡೆದ ಕುಂಬ್ಳೆ, ಸಪಾಟಾದ ನೆಲದಲ್ಲೂ ಸಹ ತಮ್ಮ ಮೊನಚಿನ ದಾಳಿಯ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಲು ನೆರವಾಗಿದ್ದರು.
ಆಸ್ಟ್ರೇಲಿಯಾ ಪ್ರವಾಸ 2003-04
ಭುಜದ ಶಸ್ತ್ರ ಚಿಕಿತ್ಸೆ ನಂತರದ ದಿನಗಳಲ್ಲಿ ಕುಂಬ್ಳೆ ಬೌಲಿಂಗ್‌ನಲ್ಲಿ ಮೊದಲಿನ ಕಸುವು ಇಲ್ಲ ಎಂದು ಅನೇಕ ವಲಯಗಳಿಂದ ಸಾಕಷ್ಟು ಟೀಕೆಗಳು ಕೇಳಿ ಬರಲಾರಂಭಿಸಿದ್ದವು. ಹರ್ಭಜನ್ ಸಿಂಗ್ ಇದೇ ವೇಳೆ ತಂಡದಲ್ಲಿ ಏಕೈಕ ಸ್ಪಿನ್ನರ್ ಸ್ಥಾನಕ್ಕೆ ಭಾರೀ ಪೈಪೋಟಿ ಕೊಡುತ್ತಿದ್ದ ಕಾಲಘಟ್ಟ ಅದು. 2003ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ಭಾರತ ತಂಡದಲ್ಲಿ ಕುಂಬ್ಳೆ ಬೇಕೇಬೇಕೆಂದು ಹಠ ಹಿಡಿದಿದ್ದ ತಂಡದ ನಾಯಕ ಸೌರವ್ ಗಂಗೂಲಿ, ಇದೇ ವಿಚಾರವಾಗಿ ಆಯ್ಕೆ ಸಮಿತಿಯೊಂದಿಗೆ ವಾದ ಮಾಡಿ, ತಮ್ಮ ನಾಯಕತ್ವಕ್ಕೆ ರಿಸ್ಕ್ ಮಾಡಿಕೊಂಡು ಜಂಬೋರನ್ನು ತಂಡದಲ್ಲಿ ಸೇರಿಸಿಕೊಂಡಿದ್ದರು.
ಅಡಿಲೇಡ್‌ನಲ್ಲಿ ನಡೆದ ಸರಣಿಯ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನ ಮೊದಲನೇ ದಿನವೇ 400 ರನ್‌ಗಳಿಗೆ ಭಾರೀ ಮೊತ್ತದತ್ತ ಸಾಗುತ್ತಿದ್ದ ಆಸೀಸ್ ತಂಡವನ್ನು 556 ರನ್‌ಗೆ ಕಟ್ಟಿ ಹಾಕಲು ನೆರವಾದ ಕುಂಬ್ಳೆ 5 ವಿಕೆಟ್‌ಗಳ ಗೊಂಚಲು ಪಡೆದರು. ಬಳಿಕ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್‌ರ ಅತ್ಯಮೋಘ ಆಟದಿಂದ ಭಾರತ ತಂಡದ ಮೊತ್ತವನ್ನು ಆಸೀಸ್‌ನ ಮೊದಲ ಇನಿಂಗ್ಸ್‌ನ ಮೊತ್ತದ ಸನಿಹ ತಂದು ನಿಲ್ಲಿಸಿದರು.
ಪಂದ್ಯದ ಮೂರನೇ ಇನಿಂಗ್ಸ್‌ನಲ್ಲಿ ಆಸೀಸ್ ತಂಡವನ್ನು ಕೇವಲ 196ರನ್ ಗಳಿಗೆ ಕಟ್ಟಿಹಾಕಿದ ಭಾರತದ ತಂಡದ ಬೌಲರ್‌ಗಳು ಭಾರೀ ಶಿಸ್ತಿನ ದಾಳಿ ನಡೆಸಿದರು. ಈ ಇನಿಂಗ್ಸ್‌ನಲ್ಲಿ ತಮ್ಮ ಫ್ಲಿಪ್ಪರ್ ನೆರವಿನಿಂದ ಅಪಾಯಕಾರಿ ಆಡಂ ಗಿಲ್‌ಕ್ರಿಸ್ಟ್‌ರನ್ನು ಬೌಲ್ಡ್ ಮಾಡಿದ್ದರು ಕುಂಬ್ಳೆ. 220 ಚಿಲ್ಲರೆ ರನ್‌ಗಳ ಟಾರ್ಗೆಟ್ ಪಡೆದ ಭಾರತ, ದ್ರಾವಿಡ್‌ರ ಸರ್ವಶ್ರೇಷ್ಠ ಇನಿಂಗ್ಸ್ ಒಂದರ ನೆರವಿನಿಂದ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು.
ಮೆಲ್ಬರ್ನ್ ಹಾಗೂ ಸಿಡ್ನಿಯಲ್ಲಿ ನಡೆದ ಸರಣಿಯ ಇನ್ನೆರಡು ಪಂದ್ಯಗಳಲ್ಲೂ ಸಹ ಮಿಂಚಿದ ಕುಂಬ್ಳೆ, ಆ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 24 ವಿಕೆಟ್ ಪಡೆದು, ತಾವಿನ್ನೂ ಭಾರತ ತಂಡದ ಶ್ರೇಷ್ಠ ಸ್ಪಿನ್ನರ್ ಎಂದು ಯಾರಿಗೂ ಅನುಮಾನವಿಲ್ಲದಂತೆ ಸಾಬೀತು ಮಾಡಿದ್ದರು.
https://www.youtube.com/watch?v=UkXSRDzcWng
ಅತ್ಯತ್ತಮ ನಾಯತ್ವದ ಗುಣಗಳೆಲ್ಲವನ್ನೂ ಹೊಂದಿದ್ದ ಅನಿಲ್ ಕುಂಬ್ಳೆಗೆ ಟೀಂ ಇಂಡಿಯಾ ನಾಯಕತ್ವ ಕೊನೆಗೂ ಒಲಿದಿದ್ದು ಅವರ ಕ್ರಿಕೆಟ್ ಜೀವನ ಸಂಧ್ಯಾಕಾಲದಲ್ಲಿ. 2007ರಲ್ಲಿ ತವರಿನಲ್ಲಿ ಪಾಕ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ನಾಯಕತ್ವದ ಚುಕ್ಕಾಣಿ ಹಿಡಿದ ಜಂಬೋ, ಇದಾದ ಬಳಿಕ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಡೆದ ಕೆಲ ವಿವಾದಾತ್ಮಕ ಘಟನೆಗಳ ನಡುವೆ ತಮ್ಮ ತಂಡದ ಆಟಗಾರರನ್ನು ಮುನ್ನಡೆಸಿದ ರೀತಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.