ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಧುರೈನಲ್ಲಿ ಅಭ್ಯರ್ಥಿಯೊಬ್ಬರು ಇಲಿಯ ಬೋನಿನಲ್ಲಿ 2000 ರೂಪಾಯಿಯನ್ನು ಇಟ್ಟುಕೊಂಡು ಬರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಮಧುರೈನ ವಾರ್ಡ್ ಸಂಖ್ಯೆ ಮೂರರಲ್ಲಿ ಸ್ಪರ್ಧಿಸಲು ಜಾಫರ್ ಷರೀಫ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಮತಕ್ಕಾಗಿ ನಗದು ವಿಚಾರದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ತಾವು ಇಲಿಯ ಬೋನಿನಲ್ಲಿ ಹಣವನ್ನು ಇಟ್ಟುಕೊಂಡು ಬಂದಿರುವುದಾಗಿ ಶೆರೀಫ್ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಮತಕ್ಕಾಗಿ ಹಣದ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಮತಕ್ಕಾಗಿ ಹಣ ತೆಗೆದುಕೊಳ್ಳುವುದು ಅಂದರೆ ನೀವು ಐದು ವರ್ಷಗಳ ಕಾಲ ಇಲಿಯ ಬೋನಿನಲ್ಲಿ ಸಿಲುಕಿಕೊಂಡಂತೆ ಎಂದು ಜಾಫರ್ ಷರೀಫ್ ಹೇಳಿದ್ದಾರೆ.
ನಾನು ನನ್ನ ವಾರ್ಡ್ನ್ನು ಸ್ವಚ್ಛತೆಗೆ ಮಾದರಿ ಎಂಬಂತೆ ಪರಿವರ್ತಿಸಲು ಬಯಸುತ್ತೇನೆ. ಮತ್ತೆ ಜನರು ಮತವನ್ನು ಮಾರಿಕೊಳ್ಳಲು ಮುಂದಾದಾಗ ಹೇಗೆ ಬಲೆಗೆ ಬೀಳುತ್ತಾರೆ ಎಂಬುದನ್ನು ತೋರಿಸಲು ಈ ಇಲಿಯ ಬೋನನ್ನು ತಂದಿದ್ದೇನೆ. ನಾನು ಉತ್ತಮ ಉದ್ಯೋಗವನ್ನು ಹೊಂದಿದ್ದೇನೆ. ನನ್ನ ಆದಾಯದಿಂದ ನಾನು ಉತ್ತಮ ಜೀವನವನ್ನು ನಡೆಸಬಲ್ಲೆ. ಆದರೆ ವಿದ್ಯಾವಂತ ನಾಗರಿಕರು ದೇಶದ ಅಭಿವೃದ್ಧಿಗಾಗಿ ಹಿಂದಿರುಗುವ ಸಮಯ ಬಂದಿದೆ. ಇದಕ್ಕಾಗಿಯೇ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಜಾಫರ್ ಹೇಳಿದರು.