ಬೇಸನ್ ಹಲ್ವಾ ತುಪ್ಪದಲ್ಲಿ ಮಾಡುವುದರಿಂದ ಇದರ ಪರಿಮಳ ಮತ್ತು ರುಚಿ ತಿನ್ನುವ ಚಪಲವನ್ನು ಹೆಚ್ಚಿಸುತ್ತದೆ. ಹಾಗೂ ಕಡಿಮೆ ಸಮಯದಲ್ಲಿ ಮನೆಯಲ್ಲಿಯೇ ಮಾಡಬಹುದು.
ಹೆಚ್ಚಾಗಿ ಪಂಜಾಬ್ ನಲ್ಲಿ ಹಬ್ಬ ಹರಿದಿನದಂದು ಈ ಹಲ್ವಾ ಮಾಡಲಾಗುತ್ತದೆ. ಹಾಗಾದರೆ ಇದರ ಟೇಸ್ಟ್ ಹೇಗಿರುತ್ತದೆ ಅಂತ ನೀವೂ ಒಮ್ಮೆ ನೋಡಿ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಕಡಲೇ ಹಿಟ್ಟು (ಬೇಸನ್) – 1 ಸಣ್ಣ ಬಟ್ಟಲು
ತುಪ್ಪ – 1/2 ಸಣ್ಣ ಬಟ್ಟಲು
ಸಕ್ಕರೆ – 1 ಸಣ್ಣ ಬಟ್ಟಲು
ನೀರು – 1/2 ಸಣ್ಣ ಬಟ್ಟಲು
ಏಲಕ್ಕಿ 2 ರಿಂದ 3
ಗೋಡಂಬಿ (ಸಣ್ಣಗೆ ಕತ್ತರಿಸಿದ) – 1 ಟೇಬಲ್ ಸ್ಪೂನ್
ಒಣದ್ರಾಕ್ಷಿ – ಅಲಂಕರಿಸಲು
ಮಾಡುವ ವಿಧಾನ
ಒಂದು ಬಾಣಲೆಯನ್ನು ಸ್ವಲ್ಪ ಬಿಸಿ ಮಾಡಿ ನಂತರ ಅದರಲ್ಲಿ ಕಡಲೇ ಹಿಟ್ಟು ಹಾಕಿ ಕೆಂಪಗಾಗುವವರೆಗೆ ಹುರಿಯಿರಿ. ಅದಕ್ಕೆ ತುಪ್ಪ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕೈಯಾಡಿಸಿ. ಸಕ್ಕರೆ ಬದಲಾಗಿ ಸಿಹಿಗೆ ಬೆಲ್ಲವನ್ನೂ ಬಳಸಬಹುದು. ನಂತರ ನೀರು ಹಾಕಿ ಕಲಸಿ. ಕಡಲೇ ಹಿಟ್ಟು, ತುಪ್ಪ ಮತ್ತು ಸಕ್ಕರೆಯ ಪ್ರಮಾಣಕ್ಕೆ ಸರಿಯಾಗಿ ನೀರನ್ನು ಹಾಕುವುದು ಅಗತ್ಯ. ಬಳಿಕ ಕುದಿಯಲು ಬಿಡಿ.
ಸ್ವಲ್ಪ ಸಮಯದ ನಂತರ ಮಿಶ್ರಣ ಗಟ್ಟಿಯಾಗುತ್ತಾ ಬರುತ್ತದೆ. ಆಗ ಗಂಟಾಗದ ರೀತಿಯಲ್ಲಿ ಕೈ ಬಿಡದೆ ಆಡಿಸಿ. ಗಟ್ಟಿಯಾದ ನಂತರ ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಿ. ಇದೇ ಸಮಯದಲ್ಲಿ ಏಲಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಹಲ್ವಾದ ಮೇಲೆ ಉದುರಿಸಿ. ಮತ್ತು ಗೋಡಂಬಿ ಒಣದ್ರಾಕ್ಷಿಯಿಂದ ಅಲಂಕರಿಸಿರಿ. ಈಗ ರುಚಿಯಾದ ಬೇಸನ್ ಹಲ್ವಾ ಸವಿಯಲು ರೆಡಿ.