ಅಡುಗೆ ಮನೆಯಲ್ಲಿ ಚಹಾ ಮಾಡಿದ ಬಳಿಕ ಎಲ್ಲೋ ಮೂಲೆಯಲ್ಲಿ ಎರಡು ಕಾಳು ಉಳಿದುಕೊಂಡಿರುವ ಸಕ್ಕರೆಗೆ ಇರುವೆಗಳ ದಂಡೇ ದಾಳಿ ಇಡುತ್ತದೆ. ಇವುಗಳನ್ನು ಹೋಗಲಾಡಿಸುವುದು ಸುಲಭದ ಕೆಲಸ ಅಲ್ಲವೇ ಅಲ್ಲ.
ಮಕ್ಕಳು ಎಸೆದ ಸಣ್ಣ ತಿಂಡಿಯನ್ನೂ ಬಿಡದೆ ಮುತ್ತಿಕ್ಕುವ ಇರುವೆಗಳನ್ನು ನಿಯಂತ್ರಿಸಲು ಇಲ್ಲೊಂದಿಷ್ಟು ಟಿಪ್ಸ್ ಗಳಿವೆ. ಮನೆಯ ಮೂಲೆ ಅಥವಾ ಸಂಧಿಗಳಲ್ಲಿ ಅರಿಶಿನ ಪುಡಿ ಸಿಂಪಡಿಸಿಡಿ. ಅಲ್ಲಿರುವ ಸಣ್ಣ ತೂತಿನಿಂದ ಇರುವೆ ಹೊರಬರದಂತೆ ಮಾಡಲು ಇದು ಅತ್ಯುತ್ತಮ ದಾರಿ.
ದಾಲ್ಚಿನಿ ಪುಡಿಗೂ ಈ ಗುಣವಿದ್ದು ನಿಮ್ಮ ಮನೆಯ ದ್ವಾರದ ಬಳಿ ಅಥವಾ ಹೆಚ್ಚಾಗಿ ಇರುವೆ ಒಳಬರುವ ಜಾಗದ ಬಳಿ ಸ್ವಲ್ಪ ದಾಲ್ಚಿನಿ ಪುಡಿ ಉದುರಿಸಿ. ಸಾಧ್ಯವಾದರೆ ದಾಲ್ಚಿನಿ ಎಣ್ಣೆಯನ್ನು ಆಯ್ದ ಮೂಲೆಗಳಿಗೆ ಸ್ಪ್ರೇ ಮಾಡಿ. ಅದೇ ರೀತಿ ನಿಂಬೆ ರಸದಿಂದಲೂ ಈ ಪ್ರಯೋಜನ ಪಡೆಯಬಹುದು.
ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದರ ಸ್ಪ್ರೇ ತಯಾರಿಸಿಡಿ. ಇದನ್ನು ಮನೆಯ ಮೂಲೆಗಳಿಗೆ ಸಿಂಪಡಿಸುವುದರಿಂದ ಇರುವೆಗಳು ಬರುವುದಿಲ್ಲ ಮಾತ್ರವಲ್ಲ ಮನೆಯವರ ಆರೋಗ್ಯಕ್ಕೂ ಒಳ್ಳೆಯದು. ಕೆಂಪು ಮೆಣಸು ಪುಡಿಯನ್ನು ಅರಿಶಿನದಂತೆ ಬಳಸಬಹುದು.