ಬಾಲಿವುಡ್ ಚಲನಚಿತ್ರ ನಿರ್ದೇಶಕ ಹನ್ಸಲ್ ಮೆಹ್ತಾ ಅವರು ತಮ್ಮ ದೀರ್ಘಕಾಲದ ಸಂಗಾತಿ ಸಫೀನಾ ಹುಸೇನ್ ಅವರನ್ನು ವಿವಾಹವಾಗಿದ್ದಾರೆ.
17 ವರ್ಷಗಳ ಸುದೀರ್ಘ ಪ್ರೇಮದ ನಂತರ ಈ ಜೋಡಿ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹನ್ಸಲ್ ಮತ್ತು ಸಫೀನಾ ದಂಪತಿಗೆ ಈಗಾಗಲೇ ಇಬ್ಬರು ಗಂಡು ಮಕ್ಕಳಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಹನ್ಸಲ್ ಮೆಹ್ತಾ, ತಮ್ಮ ಮದುವೆಗೆ ಯಾವುದೇ ಪೂರ್ವಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ. 17 ವರ್ಷಗಳ ನಂತರ, ತಮ್ಮ ಮಕ್ಕಳು ಬೆಳೆಯುತ್ತಿರುವುದನ್ನು ನೋಡುತ್ತಾ, ನಮ್ಮ ಕನಸುಗಳನ್ನು ಬೆನ್ನಟ್ಟಲು ನಾವು ನಿರ್ಧರಿಸಿದ್ದೇವೆ. ಜೀವನದಲ್ಲಿ ಎಂದಿನಂತೆ ಇದು ಕೂಡ ಪೂರ್ವಸಿದ್ಧತೆ ಮತ್ತು ಯೋಜಿತವಾಗಿರಲಿಲ್ಲ. ಅಂತಿಮವಾಗಿ ಪ್ರೀತಿ ಎಲ್ಲಕ್ಕಿಂತ ಮೇಲುಗೈ ಸಾಧಿಸುತ್ತದೆ ಎಂದು ತಮ್ಮ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ಮದುವೆ ಸಮಾರಂಭದ ಚಿತ್ರಗಳನ್ನು ಹನ್ಸಲ್ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ದಂಪತಿಗಳು ವಿವಾಹದ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ವಿವಾಹ ಸಮಾರಂಭದಲ್ಲಿ ಹನ್ಸಲ್ ಮೆಹ್ತಾ ಅವರು ಬೀಜ್ ಬ್ಲೇಜರ್‌ನೊಂದಿಗೆ ಕ್ಯಾಶುಯಲ್ ಟೀ ಮತ್ತು ಡೆನಿಮ್‌ಗಳನ್ನು ಧರಿಸಿದ್ದರು. ಆದರೆ, ಸಫೀನಾ ಹುಸೇನ್ ಗುಲಾಬಿ ಬಣ್ಣದ ಕುರ್ತಾ-ಸಲ್ವಾರ್ ನಲ್ಲಿ ಮಿಂಚಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಆಧುನಿಕ ಪ್ರೀತಿ ಎಂದು ಶೀರ್ಷಿಕೆ ನೀಡಿದ್ದಾರೆ.
ಸೆಲೆಬ್ರಿಟಿಗಳು ಹನ್ಸಲ್ ಮತ್ತು ಸಫೀನಾ ದಂಪತಿಗೆ ಅಭಿನಂದಿಸಿದ್ದಾರೆ. ನಟ ಪ್ರತೀಕ್ ಗಾಂಧಿ ಅವರು ಹನ್ಸಲ್ ಮೆಹ್ತಾ ಮತ್ತು ಸಫೀನಾ ಅವರನ್ನು ಅಭಿನಂದಿಸುತ್ತಾ ತಮಾಷೆ ಮಾಡಿದ್ದಾರೆ.