ಬೆಂಗಳೂರು: ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ತಂದೆ-ಮಗಳು ಸಾವನ್ನಪ್ಪಿದ ಪ್ರಕರಣ ಸಂಬಂಧ ಇದೀಗ ಇಬ್ಬರು ಬೆಸ್ಕಾಂ ಇಂಜಿನಿಯರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಸ್ಕಾಂ ಸಂಸ್ಥೆಯ ಸಹಾಯಕ ಅಭಿಯಂತರ ದಿನೇಶ್, ಕಿರಿಯ ಅಭಿಯಂತರ ಮಹಾಂತೇಶ್ ಬಂಧಿತ ಆರೋಪಿಗಳು. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ತಂದೆ-ಮಗಳು ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಮಾರ್ಚ್ 23ರಂದು ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು 55 ವರ್ಷದ ಶಿವರಾಜ್ ಹಾಗೂ ಮಗಳು 18 ವರ್ಷದ ಚೈತನ್ಯ ಮೃತಪಟ್ಟಿದ್ದರು. ಟ್ರಾನ್ಸ್ ಫಾರ್ಮರ್ ನಲ್ಲಿ ಸಮಸ್ಯೆಯಿದೆ ಎಂದು ಸ್ಥಳೀಯರು ಬೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಮೆರೆದಿದ್ದರು. ಇದಾದ ಕೆಲ ಹೊತ್ತಲ್ಲೇ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ದುರಂತ ಸಂಭವಿಸಿತ್ತು.