ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಳ್ಳೋದು, ವಿಡಿಯೋ ಮಾಡುವ ಹುಚ್ಚು ಹೊಂದಿರುವವರಿಗೆಲ್ಲ ಇದೊಂದು ಎಚ್ಚರಿಕೆಯ ಕರೆಗಂಟೆ. ಈ ವಿಡಿಯೋ ನೋಡಿದ್ಮೇಲಾದ್ರೂ ಜನರು ಸೆಲ್ಫಿ, ವಿಡಿಯೋ ಹುಚ್ಚನ್ನು ಬಿಟ್ಟು ಬಿಡಬೇಕು. ತೆಲಂಗಾಣದ ಹನಮಕೊಂಡ ಜಿಲ್ಲೆಯ ಕಾಜಿಪೇಟ್ ರೈಲು ನಿಲ್ದಾಣದ ಬಳಿ ನಡೆದಿರೋ ಘಟನೆ ಇದು.
17 ವರ್ಷದ ಹುಡುಗನೊಬ್ಬ ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ವಿಡಿಯೋ ಚಿತ್ರೀಕರಿಸಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿಂತಾಕುಲ ಅಕ್ಷಯ್ ರಾಜು ಎಂಬ ಈ ವಿದ್ಯಾರ್ಥಿ ರೈಲ್ವೆ ಹಳಿಗಳ ಪಕ್ಕದಲ್ಲೇ ನಡೆದುಕೊಂಡು ಹೋಗ್ತಿದ್ದ. ಆತನ ಸ್ನೇಹಿತರು ವಿಡಿಯೋ ರೆಕಾರ್ಡ್ ಮಾಡುತ್ತಿದ್ರು.
ಈ ವೇಳೆ ವೇಗವಾಗಿ ಬಂದ ರೈಲು ಅಕ್ಷಯ್‌ಗೆ ಡಿಕ್ಕಿ ಹೊಡೆದಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಅಕ್ಷಯ್ ಪಕ್ಕಕ್ಕೆ ಎಗರಿ ಬಿದ್ದಿದ್ದಾನೆ. ಅದೃಷ್ಟವಶಾತ್ ಇದನ್ನೆಲ್ಲ ಗಮನಿಸಿದ ರೈಲ್ವೇ ಗಾರ್ಡ್ ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಅಕ್ಷಯ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನ ಕಾಲು ಮುರಿದಿದೆ, ಮುಖಕ್ಕೆ ಗಾಯಗಳಾಗಿವೆ. ರೈಲಿನ ಇಂಜಿನ್ ಡಿಕ್ಕಿ ಹೊಡೆದಿದ್ದರಿಂದ ಆತ ದೂರಕ್ಕೆ ಬಂದು ಬಿದ್ದಿದ್ದ. ಅಪಘಾತದ ದೃಶ್ಯಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಬೆಚ್ಚಿಬೀಳಿಸುವಂತಿವೆ.