ಬೆಂಗಳೂರು: ಇನ್ಮುಂದೆ ಸರ್ಕಾರಿ ಸ್ವಾಮ್ಯದ ಸಂಘ-ಸಂಸ್ಥೆಗಳು ಕಾರ್ಯಕ್ರಮ, ಸಭೆ-ಸಮಾರಂಭಗಳಲ್ಲಿ ಹೂಗುಚ್ಛ, ಹಣ್ಣಿನಬುಟ್ಟಿ ನೀಡಿ ಯಾವುದೇ ರೀತಿಯ ಅನಗತ್ಯ ಖರ್ಚುಗಳನ್ನು ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ಪೇಟ ಹಾಕುವುದು, ಶಾಲು ಹೊದಿಸಿ ನೆನಪಿನ ಕಾಣಿಕೆಗಳನ್ನು ನೀಡುವುದು ಮಾಡುವಂತಿಲ್ಲ. ಶಿಷ್ಟಾಚಾರದ ಹೆಸರಲ್ಲಿ ಇಂತಹ ಸಂಪ್ರದಾಯಗಳ ಬದಲಿಗೆ ಕನ್ನಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಬಹುದು ಎಂದು ಅಧಿಕೃತ ಆದೇಶ ಹೊರಡಿಸಿದೆ.
ಇಂದು ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕೂಡ ಸಿಎಂ ಬಸವರಾಜ್ ಬೊಮ್ಮಾಯಿ ಹೂಗುಚ್ಛ ಸ್ವೀಕರಿಸಲು ನಿರಾಕರಿಸಿದ್ದು, ಇನ್ಮುಂದೆ ಇಂತಹ ಪದ್ಧತಿ ಬೇಡ ಅನವಶ್ಯಕ ವೆಚ್ಚಕ್ಕೆ ಕಡಿವಾಣ ಹಾಕಿ ಎಂದು ತಿಳಿಸಿದರು. ಸಿಎಂ ಸೂಚನೆ ಬೆನ್ನಲ್ಲೇ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಪುಸ್ತಕ ಕಾಣಿಕೆ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.