ಕೇರಳದಲ್ಲಿ ಅನೇಕ ಸಮಾಜ ಸುಧಾರಣಾ ಕ್ರಮಗಳು ಸದ್ದಿಲ್ಲದೇ ಜನರಿಂದಲೇ ಜಾರಿಗೆ ಬರುತ್ತಿರುತ್ತವೆ. ಅತ್ಯಧಿಕ ಶಿಕ್ಷಿತರು ಇರುವ ರಾಜ್ಯ ಎಂದು ಖ್ಯಾತಿ ಗಳಿಸಿದಷ್ಟೇ, ಕೇರಳದಲ್ಲಿ ಮದ್ಯಪಾನ ಪ್ರಮಾಣ ಕೂಡ ಹೆಚ್ಚೇ ಇದೆ.
ಅರಣ್ಯ ಪ್ರದೇಶವಿದೆ, ವಿವಿಧ ಸಂಸ್ಕೃತಿಗಳ ಚಾಚೂತಪ್ಪದ ಆಚರಣೆ ಇದೆ. ಇವೆಲ್ಲದರ ನಡುವೆ ರಷ್ಯಾದ ಪ್ರಭಾವದಿಂದ ವಿಶ್ವಾದ್ಯಂತ ವ್ಯಾಪಿಸಿದ ಕಮ್ಯುನಿಸ್ಟ್ ವಾದ ಸ್ವಲ್ಪ ಹೆಚ್ಚಾಗೇ ಇದೆ.
ಇಂಥದ್ದರಲ್ಲಿ ಪಾಲಕ್ಕಾಡ್ ಜಿಲ್ಲೆಯ ಒಲಶ್ಸೆರಿ ಗ್ರಾಮದ ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಲಿಂಗ ಸಮಾನತೆ ಅರಿವು ಹಾಗೂ ತಾರತಮ್ಯಕ್ಕೆ ಕಡಿವಾಣ ಹಾಕುವ ಸಣ್ಣ ಯತ್ನ ನಡೆಸಿದ್ದಾರೆ.
300 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ 9 ಮಹಿಳಾ ಶಿಕ್ಷಕರು ಮತ್ತು 8 ಪುರುಷ ಶಿಕ್ಷಕರು ಇದ್ದಾರೆ. ಮಕ್ಕಳು ಇವರನ್ನು ಸಂಬೋಧಿಸುವಾಗ ಸಾರ್ ಅಥವಾ ಮೇಡಮ್ ಎಂದು ಕರೆಯುವಂತಿಲ್ಲ. ಬದಲಿಗೆ ಟೀಚರ್ ಎಂದರೆ ಸಾಕು. ಹೌದು, ಈ ಕ್ರಮ ಜಾರಿಗೆ ತಂದ ಶಾಲೆಯ ಮುಖ್ಯೋಪಾಧ್ಯಾಯ ವೇಣುಗೋಪಾಲ್ ಎಚ್. ಅವರ ಪ್ರಕಾರ ಶಿಕ್ಷಕರನ್ನು ಅವರ ಹುದ್ದೆಯ ಹೆಸರಿನಿಂದ ಮಾತ್ರವೇ ವಿದ್ಯಾರ್ಥಿಗಳು ಸಂಬೋಧಿಸುವಂತೆ ಆಗಬೇಕು.
ಈಗಾಗಲೇ ಕೇರಳದ ಹಲವು ಶಾಲೆಗಳಲ್ಲಿ ಸಮವಸ್ತ್ರಗಳಲ್ಲಿ ಭೇದ ಇರದಂತೆ ಒಂದೇ ಸಮನಾದ ಯೂನಿಫಾರಂಗಳನ್ನು ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಹಾಕಿಕೊಳ್ಳುವಂತೆ ಅಭ್ಯಾಸ ಮಾಡಿಸಲಾಗುತ್ತಿದೆ. ಇದು ಲಿಂಗ ಸಮಾನತೆಯ ಅರಿವು ಮೂಡಿಸುವ ಕಡೆಗಿನ ಸಣ್ಣ ಹೆಜ್ಜೆ ಎನ್ನುತ್ತಿದ್ದಾರೆ ರಾಜ್ಯದ ಶಿಕ್ಷಣ ತಜ್ಞರು.
ಆಡಳಿತಾರೂಢ ಕಮ್ಯುನಿಸ್ಟ್ ಸರಕಾರ ಕೂಡ ಲಿಂಗ ಸಮಾನತೆಯ ಅರಿವಿನ ಅಭಿಯಾನಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದೆ.
ವಿಶೇಷವೆಂದರೆ, ಮಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ತೆಗೆದುಕೊಳ್ಳಲಾಗಿರುವ ನಿರ್ಧಾರದಂತೆ ಇನ್ಮುಂದೆ ಸಾರ್ವಜನಿಕರು ಪಂಚಾಯಿತಿ ಸಿಬ್ಬಂದಿಯನ್ನು ಅವರ ಹುದ್ದೆಯ ಹೆಸರಿನಿಂದಲೇ ಸಂಬೋಧಿಸಬೇಕು. ಸಾರ್ ಅಥವಾ ಮೇಡಮ್ ಎಂದು ಕರೆಯುವಂತಿಲ್ಲ. ಉದಾಹರಣೆಗೆ, ಪಂಚಾಯಿತಿ ಅಧ್ಯಕ್ಷರಿಗೆ, ‘ಅಧ್ಯಕ್ಷರೇ ‘ ಎಂದು ಕರೆಯಬೇಕು.