alex Certify ಇನ್ನೂ ಹೆಣ್ಣು ಯಾರೆಂದೇ ಗೊತ್ತಿಲ್ಲ, ಆದರೂ ನಾನೇ ಅಪ್ಪ ಎಂದು ಹೇಳುತ್ತಿದ್ದಾರೆ…! ಕಾಂಗ್ರೆಸ್‌ ಸಿಎಂ ಆಕಾಂಕ್ಷಿಗಳ ಕುರಿತು ಈಶ್ವರಪ್ಪ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೂ ಹೆಣ್ಣು ಯಾರೆಂದೇ ಗೊತ್ತಿಲ್ಲ, ಆದರೂ ನಾನೇ ಅಪ್ಪ ಎಂದು ಹೇಳುತ್ತಿದ್ದಾರೆ…! ಕಾಂಗ್ರೆಸ್‌ ಸಿಎಂ ಆಕಾಂಕ್ಷಿಗಳ ಕುರಿತು ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ: ಸಿದ್ಧರಾಮೋತ್ಸವದಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣ ಆಗಲಿದೆ ವಿನಹ ನಮ್ಮ ಪಕ್ಷಕ್ಕೆ ಏನೂ ಆಗುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75 ವರ್ಷ ತುಂಬುತ್ತಿರುವ ಸಿದ್ದರಾಮಯ್ಯನವರಿಗೆ ನಾನು ಶುಭ ಹಾರೈಸುತ್ತೇನೆ. ದೇವರು ಅವರಿಗೆ ಇನ್ನೂ ಆಯಸ್ಸು ನೀಡಿ ರಾಜ್ಯ ಹಾಗೂ ರಾಷ್ಟ್ರದ ಸೇವೆ ಮಾಡಲಿ. ಆದರೆ, ಧರ್ಮದ್ರೋಹದ ಕೆಲಸ ಮಾಡುವ ರಾಷ್ಟ್ರದ್ರೋಹಿಗಳಿಗೆ ಅವರು ಬೆಂಬಲ ನೀಡಬಾರದು ಎಂದರು.

ಸಿದ್ದರಾಮೋತ್ಸವದ ಬಗ್ಗೆ ಅವರ ಪಕ್ಷದಲ್ಲೇ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಡಿ.ಕೆ. ಶಿವಕುಮಾರ್, ಎಸ್.ಆರ್. ಪಾಟೀಲ್, ಎಂ.ಬಿ. ಪಾಟೀಲ್ ಸಿಎಂ ಆಗಲು ಹೊರಟಿದ್ದಾರೆ. ಇವರು ಮೊದಲು ಬಹುಮತ ಪಡೆದು ಅಧಿಕಾರಕ್ಕೆ ಬರಲಿ.

ಆ ಪಕ್ಷದ ಕೇಂದ್ರದ ನಾಯಕರು ಯಾರು ನಾಯಕರು ಎಂದು ತೀರ್ಮಾನಿಸಲಿ. ಇನ್ನೂ ಹೆಣ್ಣು ಯಾರೆಂದೇ ಗೊತ್ತಿಲ್ಲ. ಆದರೂ ನಾನೇ ಅಪ್ಪ ನಾನೇ ಅಪ್ಪ ಎಂದು ಹೇಳುತ್ತಿದ್ದಾರೆ. ಮುಟ್ಟುವ ಮಗು ಹೆಣ್ಣೋ, ಗಂಡೋ ಅಥವಾ ಸತ್ತ ಮಗುವೋ ಎಂದು ಗೊತ್ತಾಗಲಿ. ಮೊದಲು ನೀವು ಒಂದಾಗಿ, ಚುನಾವಣೆಯಲ್ಲಿ ಗೆದ್ದು ಬನ್ನಿ. ಚುನಾವಣೆಯಲ್ಲಿ ಗೆಲ್ಲಲಿಲ್ಲ ಎಂದರೆ ಸತ್ತ ಮಗ ಹುಟ್ಟಿದಂತೆ. ಕಾಂಗ್ರೆಸ್ ನಾಯಕರು ಇನ್ನೂ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ಸನ್ನು ಯಾಕೆ ಜನ ತಿರಸ್ಕರಿಸಿದರು, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು ? ಈ ಎಲ್ಲಾ ಅಂಶಗಳ ಬಗ್ಗೆ ಗಮನ ಹರಿಸಬೇಕು. ಅದು ಬಿಟ್ಟು ಸಮಾಜವಾದಿ ಎಂದು ಹೇಳಿಕೊಂಡು ಅದ್ದೂರಿ ಜಯಂತಿ ಮಾಡುವುದು ಎಷ್ಟು ಸರಿ. ಇದು ಆ ಪಕ್ಷಕ್ಕೆ ತಿರುಗುಬಾಣ ಆಗಲಿದೆ ವಿನಃ ನಮ್ಮ ಪಕ್ಷಕ್ಕೆ ಏನೂ ಆಗುವುದಿಲ್ಲ ಎಂದರು.

ಪಕ್ಷ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನಳೀನ್ ಕುಮಾರ್ ಕಟೀಲ್ ಜೊತೆ ಇರಬೇಕು. ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರದ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ. ಯೋಗಿ ಮಾದರಿ ನಿರ್ಧಾರ ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೋ ಗೊತ್ತಿಲ್ಲ. ಪಕ್ಷದ ಕಾರ್ಯಕರ್ತರ ಹತ್ಯೆ ಬಗ್ಗೆ ಅನೇಕರಲ್ಲಿ ಅಸಮಾಧಾನ ಇದೆ. ಹಾಗಾಂತ ರಾಜೀನಾಮೆ ನೀಡುವುದು ಎಷ್ಟರಮಟ್ಟಿಗೆ ಸರಿ..? ರಾಜೀನಾಮೆ ಬದಲು ಹಿರಿಯ ನೇತೃತ್ವದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕು. ಟಿವಿಗಳಲ್ಲಿ ಬರುವಂತೆ ಕಾರ್ಯಕರ್ತರು ರಾಜೀನಾಮೆ ನೀಡಿಲ್ಲ. ನೀವು ಹೋದರೆ ಬೇರೆಯವರು ಬರುತ್ತಾರೆ ಎಂದು ನಾನು ಹೇಳಿದ್ದು ನಿಜ. ರಾಜೀನಾಮೆ ನೀಡಿದವರು ಅದನ್ನು ಹಿಂಪಡೆದಿದ್ದಾರೆ. ಆಕ್ರೋಶ ಭರದಲ್ಲಿ ಸಿಟ್ಟಿಗೆ ಕೈ ಕೊಟ್ಟರೆ ಸಂಘಟನೆ ಕತೆ ಏನು ? ಇವರಿಗೆ ಜವಾಬ್ದಾರಿ ಕೊಟ್ಟಿದ್ದು ಯುವ ಮೋರ್ಚಾವನ್ನು ಬಲಿಷ್ಠವಾಗಿ ಕಟ್ಟಬೇಕು ಎಂದು ಹೇಳಿದರು.

ಚಕ್ರವರ್ತಿ ಸೂಲಿಬೆಲೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 23 ಕಗ್ಗೊಲೆಯಾಗಿದ್ದು ಕಾಂಗ್ರೆಸ್ ಅವಧಿಯಲ್ಲಿ. 17 ಜನ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸಿಂಬಲ್ ಮೇಲೆ ಗೆದ್ದು ಬಂದಿದ್ದಾರೆ. ಅವರು ಬಾರದಿದ್ದರೆ ಪಕ್ಷ ಅಧಿಕಾರಕ್ಕೆ ಬರುತ್ತಿರಲಿಲ್ಲ. ಗೋ ಹತ್ಯೆ ಸೇರಿದಂತೆ ಹಲವು ಕಾಯ್ದೆ ಜಾರಿಗೆ ಬರುತ್ತಿರಲಿಲ್ಲ. ಬೇರೆ ಪಕ್ಷದವರು ಬಿಜೆಪಿಗೆ ಬಂದಿದ್ದರಿಂದಲೇ ಪೂರ್ಣ ಬಹುಮತ ಬಂತು. ನಮಗೂ ಕಾರ್ಯಕರ್ತರನ್ನು ಕಳೆದುಕೊಂಡಿದ್ದಕ್ಕೆ ನೋವಿದೆ. ಪರಿಸ್ಥಿತಿಯನ್ನು ಎಲ್ಲರೂ ಸೇರಿಕೊಂಡು ಎದುರಿಸಬೇಕಿದೆ. ಚಕ್ರವರ್ತಿ ಸೂಲಿಬೆಲೆ ಬಗ್ಗೆ ನನಗೆ ಗೌರವ ಇದೆ. ಅವರೊಬ್ಬ ರಾಷ್ಟ್ರಭಕ್ತ. ಅವರಿಗೆ ಸಿಟ್ಟು ಬಂದಿದೆ. ಹೀಗಾಗಿ ಮಾತನಾಡುತ್ತಾರೆ ಎಂದರು.

ಕೊಲೆಗಡುಕರು, ರಾಷ್ಟ್ರದ್ರೋಹಿಗಳು ನಮ್ಮ ಕಾರ್ಯಕರ್ತರನ್ನು ಕೊಲೆ ಮಾಡುತ್ತಿದ್ದಾರೆ. ನಾವು ನಮ್ಮ ಕಾರ್ಯಕರ್ತರನ್ನು ದೊಡ್ಡ ಸಂಖ್ಯೆಯಲ್ಲಿ ಕಳೆದುಕೊಂಡಿದ್ದೇವೆ. ಅನೇಕರು ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಎಸ್.ಡಿ.ಪಿ.ಐ ಹಾಗೂ ಪಿಎಫ್ಐ ಕೊಲೆಗಡುಕರಿಗೆ ಬೆಂಬಲ ನೀಡುತ್ತಿವೆ. ಹೀಗಾಗಿ ನಮ್ಮ ಮನೆಯವರಿಗೆ ಸಿಟ್ಟು ಬರುತ್ತಿದೆ. ಆದರೆ ಸಿಟ್ಟನ್ನು ಯಾರ ಮೇಲೆ ತೋರಿಸಬೇಕು. ಕೊಲೆ ಆರೋಪಿಗಳನ್ನು ಸರ್ಕಾರ ತಕ್ಷಣ ಬಂಧಿಸಿದೆ. ಯುಪಿ ಮಾದರಿ ಕ್ರಮ ಬೇಕೆಂದು ಕಾರ್ಯಕರ್ತರು ಬಯಸುತ್ತಿದ್ದಾರೆ. ಈ ಬಗ್ಗೆ ನಾನು ಕೇಂದ್ರದ ನಾಯಕರೊಂದಿಗೆ ಮಾತನಾಡಿದ್ದೇನೆ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...