ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ ವಾರಗಳೇ ಕಳೆದಿದ್ದರೂ ಉತ್ತಮ ಮಳೆಯಾಗುತ್ತಿಲ್ಲ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತಾಪಿ ವರ್ಗ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದೆ. ಇದರ ಜೊತೆಗೆ ಉತ್ತಮ ಮುಂಗಾರು ಮಳೆ ಆಗದಿರುವ ಕಾರಣ ವಿದ್ಯುತ್ ಉತ್ಪಾದನೆ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ ಕಂಡುಬರುತ್ತಿದೆ.
ಮುಂಗಾರು ಮಳೆ ವ್ಯಾಪಕವಾಗಿ ಸುರಿಯದ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿಯಲ್ಲಿ ನೀರಿನ ಸಂಗ್ರಹ ಇಳಿಮುಖವಾಗಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆಗೆ ತೊಡಕುಂಟಾಗಲಿದೆ. ಕಳೆದ ವರ್ಷ ಇದೇ ದಿನ (ಭಾನುವಾರ) ಜಲಾಶಯದಲ್ಲಿ ಒಟ್ಟು 1775.40 ಅಡಿ ನೀರು ಸಂಗ್ರಹವಾಗಿದ್ದರೆ ಈ ಬಾರಿ ಇದು 1751.25 ಅಡಿಗೆ ತಲುಪಿದೆ.
ಶರಾವತಿ ಜಲಾನಯನ ಪ್ರದೇಶಗಳಲ್ಲಿ ಮಳೆ ವ್ಯಾಪಕವಾಗದ ಪರಿಣಾಮ ಈ ಪರಿಸ್ಥಿತಿ ಉದ್ಭವಿಸಿದ್ದು,156 ಟಿಎಂಸಿ ಅಡಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಸದ್ಯ 47.23 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಅಂದರೆ ಜಲಾಶಯದ ಒಟ್ಟು ಸಾಮರ್ಥ್ಯದ ಶೇಕಡಾ 31.15 ಅಡಿ ಮಾತ್ರ ಭರ್ತಿಯಾಗಿದೆ. ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಚೆನ್ನಾಗಿ ಆಗಲಿದೆ ಎಂದು ಹೇಳಲಾಗುತ್ತಿದ್ದು, ಇದೇ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ.