alex Certify ಇನ್ನೂ ಆಗದ ವಿಪಕ್ಷ ನಾಯಕನ ಆಯ್ಕೆ; ಬಿಜೆಪಿ ಕಾರ್ಯಕರ್ತರಿಂದಲೇ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೂ ಆಗದ ವಿಪಕ್ಷ ನಾಯಕನ ಆಯ್ಕೆ; ಬಿಜೆಪಿ ಕಾರ್ಯಕರ್ತರಿಂದಲೇ ಆಕ್ರೋಶ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಪರಾಭವಗೊಂಡಿರುವ ಬಿಜೆಪಿ, ಕೇವಲ 66 ಸ್ಥಾನಗಳನ್ನಷ್ಟೇ ಗಳಿಸಲು ಶಕ್ತವಾಗಿದೆ. ಭರ್ಜರಿ ಬಹುಮತ ಗಳಿಸಿದ್ದ ಕಾಂಗ್ರೆಸ್ ಈಗಾಗಲೇ ಅಧಿಕಾರಕ್ಕೇರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೂರ್ಣ ಪ್ರಮಾಣದ ಸಚಿವ ಸಂಪುಟವನ್ನು ರಚಿಸಿದ್ದಾರೆ. ಅಷ್ಟೇ ಅಲ್ಲ, ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ‘ಗ್ಯಾರಂಟಿ’ ಯೋಜನೆಗಳ ಜಾರಿಗೆ ಅಸ್ತು ಎನ್ನಲಾಗಿದೆ.

ಅತ್ತ ಬಿಜೆಪಿ ಪಾಳೆಯದಲ್ಲಿ ಸೋಲಿನ ಬಳಿಕ ಮಂಕು ಕವಿದ ವಾತಾವರಣವಿದ್ದು, ಪಕ್ಷದ ಕೇಂದ್ರ ನಾಯಕರೂ ಸಹ ರಾಜ್ಯ ನಾಯಕರೊಂದಿಗೆ ಈವರೆಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಹೇಳಲಾಗಿದೆ. ಹೀಗಾಗಿಯೇ ಫಲಿತಾಂಶ ಹೊರ ಬಿದ್ದು ಇಷ್ಟು ದಿನಗಳಾದರೂ ಸಹ ತನ್ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಮಾಡಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ. ಇದರ ಮಧ್ಯೆ ಕಾರ್ಯಕರ್ತರ ಆಕ್ರೋಶದ ಕಟ್ಟೆಯೊಡೆದಿದ್ದು, ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕೆಲವರ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ನಾಯಕರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಿರುವ ಬಿಜೆಪಿ ಕಾರ್ಯಕರ್ತರು, ವಿಪಕ್ಷ ನಾಯಕನ ಸ್ಥಾನಕ್ಕೆ ಸಮರ್ಥರನ್ನು ಆಯ್ಕೆ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು, ಈ ಬಾರಿ ಯಾವುದೇ ಕಾರಣಕ್ಕೂ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಬಾರದು. ಅವರಿಗೇ ಟಿಕೆಟ್ ನೀಡಿದರೆ ಹಿಂದುತ್ವ ಪ್ರತಿಪಾದಿಸುವವರ ಪರ್ಯಾಯ ಆಯ್ಕೆಯೂ ನಮ್ಮ ಮುಂದಿದೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಬೇಸರ ವ್ಯಕ್ತಪಡಿಸಿದ್ದು, 13 ಸಂಸದರ ತೇಜೋವಧೆ ಮಾಡುವ ಪ್ರಯತ್ನ ನಡೆದಿದೆ. ಇವರುಗಳಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ ಎಂದು ವದಂತಿ ಹರಿ ಬಿಡಲಾಗುತ್ತಿದೆ. ಹೀಗಾಗಿ ಪಕ್ಷದ ಕೇಂದ್ರ ನಾಯಕರು ಕೂಡಲೇ ಮಧ್ಯಪ್ರವೇಶಿಸಿ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...