ಈ ಬಾರಿ ‘ಮುಂಗಾರು’ ರಾಜ್ಯಕ್ಕೆ ವಿಳಂಬವಾಗಿ ಎಂಟ್ರಿ ಕೊಟ್ಟಿದ್ದು, ಜೊತೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ರಾಜ್ಯದ ಜಲಾಶಯಗಳು ಬರಿದಾಗುತ್ತಾ ಬಂದಿದ್ದು, ವಿದ್ಯುತ್ ಉತ್ಪಾದನೆ ಜೊತೆಗೆ ಕುಡಿಯುವ ನೀರಿಗೂ ಸಹ ತತ್ವಾರ ಉಂಟಾಗುವ ಪರಿಸ್ಥಿತಿ ಎದುರಾಗಿದೆ.
ಇದರ ಮಧ್ಯೆ ಹಾವೇರಿಯಲ್ಲಿ ಮಾತನಾಡಿರುವ ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಇನ್ನು ಹತ್ತರಿಂದ ಹದಿನೈದು ದಿನಗಳ ಕಾಲ ಮಳೆ ಕೊರತೆ ಇದೆ ರೀತಿ ಮುಂದುವರೆದರೆ ಕಂದಾಯ ಸಚಿವರು ಪರಿಶೀಲನೆ ನಡೆಸಿ ಬಳಿಕ ಸರ್ಕಾರದ ಹಂತದಲ್ಲಿ ಬರಗಾಲ ಘೋಷಣೆ ಕುರಿತಂತೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಮಳೆ ಕೊರತೆ ಎದುರಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು ಪರ್ಯಾಯ ಬೆಳೆ ಕುರಿತು ರೈತರಿಗೆ ಮಾಹಿತಿ ನೀಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಅವರು, ಮೋಡ ಬಿತ್ತನೆ ಕುರಿತಂತೆ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.