ದೇಶದಲ್ಲಿ ಮದುವೆ ಸೀಸನ್ ಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನಿಂದಾಗಿ ಮದುವೆಗಳ ಸಂಖ್ಯೆ ಕಡಿಮೆಯಾಗಿತ್ತು. ಆದ್ರೆ ಈ ವರ್ಷ ನವೆಂಬರ್‌ನಿಂದ ಆರಂಭವಾಗಿ ಫೆಬ್ರವರಿ 2023 ರವರೆಗೆ ದಾಖಲೆಯ ಸಂಖ್ಯೆಯಲ್ಲಿ ಮದುವೆಗಳು ನಡೆಯಲಿವೆ. ಈ ಮೂರೂವರೆ ತಿಂಗಳುಗಳಲ್ಲಿ ದೇಶದಲ್ಲಿ 32 ಲಕ್ಷ ಮದುವೆಗಳು ನಡೆಯಲಿವೆಯಂತೆ.
ಇದರ ಪರಿಣಾಮ ನೇರವಾಗಿ ಮಾರುಕಟ್ಟೆಯ ಮೇಲಾಗಲಿದೆ. ಚಿನ್ನ, ಬೆಳ್ಳಿಯ ಆಭರಣ ಸೇರಿದಂತೆ ಎಲೆಕ್ಟ್ರಿಕ್ ವಸ್ತುಗಳು, ಬಟ್ಟೆಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಲಿದೆ. ಧನ್ ತೇರಸ್ ಸಮಯದಲ್ಲೇ ಬಂಗಾರ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿತ್ತು. ಸುಮಾರು 25 ಸಾವಿರ ಕೋಟಿ ವಹಿವಾಟು ನಡೆದಿತ್ತು. ಮದುವೆಯ ಬಜೆಟ್‌ನಲ್ಲಿ ಸಾಮಾನ್ಯವಾಗಿ ಎಲ್ಲರೂ ಶೇ.15 ರಿಂದ 20 ರಷ್ಟನ್ನು ಚಿನ್ನ ಮತ್ತು ವಜ್ರದ ಆಭರಣಗಳಿಗಾಗಿ ಖರ್ಚು ಮಾಡುತ್ತಾರೆ.
ಹಾಗಾಗಿ ಚಿನ್ನ ಮತ್ತು ಬೆಳ್ಳಿಯ ಬೇಡಿಕೆಯಲ್ಲಿ ಶೇ.10 ರಿಂದ 12 ರಷ್ಟು ಜಿಗಿತವಾಗಬಹುದು. ಮತ್ತೊಂದೆಡೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಕೂಡ ನಿರಂತರ ಏರಿಕೆಯಾಗ್ತಿದೆ. ನವೆಂಬರ್ 1 ರಿಂದ ನವೆಂಬರ್ 15 ರವರೆಗೆ ಚಿನ್ನದ ಬೆಲೆ 10 ಗ್ರಾಂಗೆ 2400 ರೂಪಾಯಿ ಏರಿಕೆಯಾಗಿದ್ದು, ಬೆಳ್ಳಿ ಬೆಲೆ ಕೆಜಿಗೆ ಸುಮಾರು 4500 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಹೊಸ ವರ್ಷದ ವೇಳೆಗೆ ಚಿನ್ನವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ. ಬೆಳ್ಳಿ ಕೆಜಿಗೆ 85,000 ರೂಪಾಯಿಗೆ ತಲುಪುವ ಸಾಧ್ಯತೆ ಇದೆ. ಸದ್ಯ ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 163 ರೂಪಾಯಿ ಏರಿಕೆಯಾಗಿ 52,881 ರೂಪಾಯಿಗೆ ತಲುಪಿದೆ. ಬೆಳ್ಳಿ ಪ್ರತಿ ಕೆಜಿಗೆ 214 ರೂಪಾಯಿಗಳಷ್ಟು ಏರಿಕೆಯೊಂದಿಗೆ 62,684 ರೂಪಾಯಿ ಆಗಿದೆ.