ವರ್ಷಾನುಗಟ್ಟಲೇ ಜೊತೆಗಿದ್ದ ಸ್ನೇಹಿತರೇ ನೆನಪಾಗುವುದಿಲ್ಲ. ಗೆಳೆಯರ ಹೆಸರನ್ನೇ ಮರೆತುಬಿಡುತ್ತಾರೆ. ಎದುರಿಗೆ ಸಿಕ್ಕರೂ ಗುರುತು ಹಿಡಿಯುವುದಿಲ್ಲ. ಹೀಗೆಲ್ಲಾ ಏಕಾಗುತ್ತದೆ ? ಇದರ ಹಿಂದೆ ಏನಿರಬಹುದು ಕಾರಣ ? ಇಲ್ಲಿದೆ ಉತ್ತರ. ನರ ವಿಜ್ಞಾನಿಗಳು ಈ ಬಗ್ಗೆ ಸುದೀರ್ಘ ಸಂಶೋಧನೆ ನಡೆಸಿದ್ದು, ಕಾರಣ ಬಹಿರಂಗಗೊಂಡಿದೆ.
ಮೆದುಳಿಗೆ ಪೆಟ್ಟು ಬಿದ್ದರೆ, ನರಮಂಡಲಕ್ಕೆ ಘಾಸಿಯಾದರೆ, ರಕ್ತ ಹೆಪ್ಪುಗಟ್ಟಿದ್ದರೆ, ರಕ್ತದ ಪರಿಚಲನೆ ಸರಿಯಾಗಿ ಆಗದಿದ್ದರೆ, ಕ್ಯಾನ್ಸರ್, ಟ್ಯೂಮರ್ ಅಥವಾ ಯಾವುದೇ ಗಡ್ಡೆಗಳು ಬೆಳೆದರೆ, ಅಲ್ಝಮರ್ ಅಥವಾ ಸ್ಕಿಜೋಫ್ರೇನಿಯಾ ಮುಂತಾದ ಸಮಸ್ಯೆಗಳು ಸ್ಮರಣ ಶಕ್ತಿಯನ್ನು ಕುಗ್ಗಿಸುತ್ತವೆ.
ಆದರೆ, ಇದರ ಹಿಂದಿನ ಕಾರಣ ಹಾಗೂ ಚಿಕಿತ್ಸೆಯ ಸಾಧ್ಯತೆಗಳನ್ನು ಅರಿಯಲು ಅಧ್ಯಯನ ನಡೆಸಿದ್ದು, ಎಲ್ಲ ಸರಿ ಇದ್ದರೂ ಕೆಲವರು ಗೆಳೆಯರ ಹೆಸರನ್ನೇ ಮರೆತು ಬಿಡಲು ಕಾರಣವೇನು ಎಂಬುದರ ಅಧ್ಯಯನವೂ ನಡೆದಿತ್ತು. ಸಂಶೋಧಕರು ಕೆಲ ವ್ಯಕ್ತಿಗಳ ಚಿತ್ರಗಳನ್ನು ತೋರಿಸಿ, ಈ ಹಿಂದೆ ಯಾವಾಗಲಾದರೂ ಇವರನ್ನು ನೋಡಿದ್ದೀರಾ ? ಇದು ಯಾರ ಮುಖ ಇರಬಹುದು ಎಂಬ ಪ್ರಶ್ನೆಗಳನ್ನು ಮುಂದಿಟ್ಟರು. ಬಹುತೇಕರು ಪತ್ತೆ ಹಚ್ಚುವಲ್ಲಿ ವಿಫಲರಾದರು.
ನರಮಂಡಲದಲ್ಲಿನ ವಿದ್ಯುದ್ವಾರ (ಎಲೆಕ್ಟ್ರಾಡ್ಸ್) ಗಳ ಮೂಲಕ ನ್ಯೂರಾನ್ ಕೋಶಗಳು ಎಲ್ಲ ಮಾಹಿತಿಯನ್ನೂ ರವಾನಿಸುತ್ತವೆ. ಅದನ್ನು ಸಾರ್ವಕಾಲಿಕ ನೆನಪು ಅಥವಾ ತಾತ್ಕಾಲಿಕ ನೆನಪಾಗಿ ಇಟ್ಟುಕೊಳ್ಳಬೇಕೇ ಎಂಬುದನ್ನು ಮೆದುಳು ನಿರ್ಧರಿಸುತ್ತದೆ. ಮುಖ್ಯವಾಗಿ ಮುಮ್ಮೆದಳು ಹಾಗೂ ಹಿಮ್ಮೆದಳಲ್ಲಿ ಸಾರ್ವಕಾಲಿಕ ಮತ್ತು ತಾತ್ಕಾಲಿಕ ನೆನಪುಗಳು ಉಳಿಯುತ್ತವೆ. ಹೀಗಾಗಿ ಕೆಲವೊಮ್ಮೆ ನೆನಪುಗಳಲ್ಲಿ ಕೆಲ ವಿಷಯಗಳು ಉಳಿಯುವುದೇ ಇಲ್ಲ.