ಕಾಮನಬಿಲ್ಲು ಮೂಡಿದಾಗ ಆಕಾಶ ಕಲರ್ಫುಲ್ ಆಗಿ ಕಾಣಿಸುತ್ತೆ. ಸೂರ್ಯಾಸ್ತದ ಸಮಯದಲ್ಲಿ ಹೊಂಬಣ್ಣಕ್ಕೆ ತಿರುಗುವುದು ಸಾಮಾನ್ಯ. ಕೆಲವೊಮ್ಮೆ ಅಚ್ಚ ನೀಲಿ ಬಣ್ಣದ ಆಗಸವನ್ನೂ ನೀವು ನೋಡಿರ್ತೀರಾ. ಆದ್ರೆ ಆಸ್ಟ್ರೇಲಿಯಾದಲ್ಲಿ ವಿಸ್ಮಯವೊಂದು ಸಂಭವಿಸಿದೆ. ಆಕಾಶ ಅಚ್ಚನೆಯ ಗುಲಾಬಿ ಬಣ್ಣಕ್ಕೆ ತಿರುಗಿದೆ.
ಆಸ್ಟ್ರೇಲಿಯಾದ ಮಿಲ್ದುರಾ ನಗರದಲ್ಲಿ ಆಕಾಶ ಇದ್ದಕ್ಕಿದ್ದಂತೆ ಗುಲಾಬಿ ಬಣ್ಣದಲ್ಲಿ ಮಿನುಗುತ್ತಿತ್ತು. ಇದನ್ನು ನೋಡಿದ ಅಲ್ಲಿನ ನಿವಾಸಿಗಳಿಗೆಲ್ಲ ಅಚ್ಚರಿಯೋ ಅಚ್ಚರಿ. ಇದು ಏಲಿಯನ್ಗಳ ಪ್ರಭಾವ ಇರಬಹುದು ಅಂತಾನೂ ಎಷ್ಟೋ ಮಂದಿ ಅಂದುಕೊಂಡಿದ್ದರು. ಈ ಪಿಂಕ್ ಸ್ಕೈ ಹಿಂದೆ ಯಾವುದೋ ವಿಸ್ಮಯವೇ ಅಡಗಿದೆ ಎಂಬ ಭಾವನೆ ಜನರಲ್ಲಿತ್ತು.
ವಿಚಿತ್ರವಾಗಿದ್ದರೂ ಸುಂದರವಾಗಿ ಕಾಣ್ತಾ ಇದ್ದ ಗುಲಾಬಿ ಆಗಸವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಕಷ್ಟು ಜನರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದ್ರೆ ಈ ರೀತಿ ಆಕಾಶದ ಬಣ್ಣ ಗುಲಾಬಿಗೆ ತಿರುಗಲು ಏಲಿಯನ್ಗಳು ಕಾರಣವಲ್ಲ ಅನ್ನೋದು ಸ್ಪಷ್ಟವಾಗಿದೆ.
ಕ್ಯಾನ್ಗ್ರೂಪ್ ಎಂಬ ಔಷಧ ಫ್ಯಾಕ್ಟರಿಯಲ್ಲಿನ ಬೆಳಕು ಆಕಾಶದತ್ತ ಪ್ರತಿಫಲಿಸಿದೆ. ಈ ಬಗ್ಗೆ ಖುದ್ದು ಕಂಪನಿ ಕೂಡ ಸ್ಪಷ್ಟನೆ ನೀಡಿದೆ. ಅದೇನೇ ಆದ್ರೂ ಈ ವಿಚಿತ್ರ ಗುಲಾಬಿ ಆಕಾಶದ ಫೋಟೋಗಳಂತೂ ಜಾಲತಾಣಗಳಲ್ಲಿ ವೈರಲ್ ಆಗಿವೆ.