ರಕ್ತಹೀನತೆ ನಿವಾರಿಸಿ ಹಿಮೋಗ್ಲೋಬಿನ್ ಹೆಚ್ಚಿಸಲು ಬೆಲ್ಲ ಬಹೂಪಯೋಗಿ. ಅಧಿಕ ಕಬ್ಬಿಣಾಂಶ ಹೊಂದಿರುವ ಬೆಲ್ಲವನ್ನು ನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳಿವೆ. ಅದರ ಹೊರತಾಗಿ ಸೌಂದರ್ಯ ವರ್ಧನೆಗೂ ಬೆಲ್ಲವನ್ನು ಬಳಸುತ್ತಾರೆ. ಹೇಗೆಂಬುದನ್ನು ನೋಡೋಣ.
ಗಂಟಲು ನೋವು ಆದಾಗ ಸುಣ್ಣದೊಂದಿಗೆ ಬೆಲ್ಲವನ್ನು ಬೆರೆಸಿ ಕುತ್ತಿಗೆ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ಗಂಟಲು ನೋವು ಕಡಿಮೆಯಾಗುವುದು ನಿಮಗೆ ಗೊತ್ತೇ ಇದೆ. ಅದರಂತೆ ಕೇವಲ ಬೆಲ್ಲವನ್ನು ಪೇಸ್ಟ್ ರೂಪಕ್ಕೆ ಬರಿಸಿ ತುಸು ಜೇನು ಬೆರೆಸಿ ಕುತ್ತಿಗೆ ಭಾಗಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ಬಳಿಕ ತೊಳೆಯುವುದರಿಂದ ಕಪ್ಪಾಗಿರುವ ಕುತ್ತಿಗೆ ಸಹಜ ಬಣ್ಣಕ್ಕೆ ಬರುತ್ತದೆ.
ಬೆಲ್ಲದಲ್ಲಿರುವ ಗ್ಲುಟೆನ್ ಎಂಬ ಅಂಶ ಆಂಟಿ ಆಕ್ಸಿಡೆಂಟ್ ಜೊತೆ ದೇಹವನ್ನು ಸೇರುವುದರಿಂದ ಚರ್ಮದ ಮೇಲ್ಮೈಯಲ್ಲಿ ಮೂಡುವ ಮೊಡವೆ, ಗುಳ್ಳೆ, ಸುಕ್ಕುಗಳು ಅಥವಾ ಮತ್ತಿತರ ಗೆರೆಗಳನ್ನು ಕಡಿಮೆ ಮಾಡುತ್ತದೆ. ಬೆಲ್ಲದ ಪುಡಿಗೆ ನಿಂಬೆರಸ ಸೇರಿಸಿ ಮಿಶ್ರಣವನ್ನು ಫೇಸ್ ಪ್ಯಾಕ್ ರೂಪದಲ್ಲಿ ಮುಖಕ್ಕೆ ಹಚ್ಚಿ. ಹದಿನೈದು ನಿಮಿಷದ ಬಳಿಕ ಸ್ವಚ್ಛವಾದ ನೀರಿನಿಂದ ಮುಖ ತೊಳೆಯಿರಿ.
ಬೆಲ್ಲಕ್ಕೆ ಒಂದು ಟೀ ಚಮಚ ಬ್ಲ್ಯಾಕ್ ಟೀ ಪುಡಿ ಮತ್ತು ದ್ರಾಕ್ಷಿ ಹಣ್ಣಿನ ರಸ, ರೋಸ್ ವಾಟರ್ ಮತ್ತು ಚಿಟಿಕೆ ಅರಶಿನ ಪುಡಿ ಸೇರಿಸಿ. 20 ನಿಮಿಷದ ಬಳಿಕ ಮುಖ ತೊಳೆಯಿರಿ. ಇದು ಅತ್ಯುತ್ತಮ ಫೇಸ್ ಪ್ಯಾಕ್ ನ ಪರಿಣಾಮ ಬೀರುತ್ತದೆ.