ಆಸ್ಟ್ರೇಲಿಯಾದಲ್ಲಿ ಕಂಡುಬರುವ ಇನ್‌ಲ್ಯಾಂಡ್ ತೈಪಾನ್ ವಿಶ್ವದ ಅತ್ಯಂತ ವಿಷಕಾರಿ ಹಾವು ಎಂದು ಪರಿಗಣಿಸಲಾಗಿದೆ. ಆಸ್ಟ್ರೇಲಿಯನ್ ಮ್ಯೂಸಿಯಂ ಪ್ರಕಾರ, ಇನ್ಲ್ಯಾಂಡ್ ತೈಪಾನ್ ಅನ್ನು ಉಗ್ರ ಹಾವು ಎಂದೇ ಕರೆಯಲಾಗುತ್ತದೆ. ಇದು ಗಾತ್ರದಲ್ಲಿ ಬಹಳ ದೊಡ್ಡದಾಗಿದೆ. ಬಲವಾದ ಮೈಕಟ್ಟು ಮತ್ತು ಆಳವಾದ, ಉದ್ದವಾದ ಆಕಾರದ ತಲೆಯನ್ನು ಹೊಂದಿದೆ. ಈ ಹಾವು ಮುಂಜಾನೆ ಸಮಯದಲ್ಲಿ ಹೆಚ್ಚು ಸಕ್ರಿಯವಾಗಿರುತ್ತದೆ.
ಹಾವನ್ನು ಮೊದಲು 1879ರಲ್ಲಿ ಫ್ರೆಡ್ರಿಕ್ ಮೆಕಾಯ್ ಎಂಬುವವರು ಪತ್ತೆ ಮಾಡಿದ್ರು. ಆದರೆ ಮುಂದಿನ 90 ವರ್ಷಗಳವರೆಗೆ ವೈಜ್ಞಾನಿಕ ಸಮುದಾಯಕ್ಕೆ ಈ ಹಾವು ರಹಸ್ಯವಾಗಿಯೇ ಉಳಿಯಿತು. ಏಕೆಂದರೆ ಈ ಜಾತಿಯ ಯಾವುದೇ ಹಾವುಗಳು ಪತ್ತೆಯಾಗಲೇ ಇಲ್ಲ.
ಇದನ್ನು 1972 ರಲ್ಲಿ ಮರುಶೋಧಿಸಲಾಯಿತು. ಆಸ್ಟ್ರೇಲಿಯಾ ಹೊರತುಪಡಿಸಿ ಉಳಿದ ಭಾಗದ ಜನರಿಗೆ ಈ ವಿಷಕಾರಿ ಹಾವಿನ ಬಗ್ಗೆ ತಿಳಿದಿಲ್ಲ. ಹಗಲಿನಲ್ಲಿ ಇವು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಜೊತೆಗೆ ನೆಲದ ಮೇಲೆ ಹೆಚ್ಚು ಹೊತ್ತು ನೆಲೆಸುವುದಿಲ್ಲ. ಹಾಗಾಗಿ ಕಾಡಿನಲ್ಲಿ ಈ ಹಾವುಗಳು ಕಾಣುವುದು ಅಪರೂಪ.
ಹಾವಿನ ವಿಷವನ್ನು LD50 ಮಾಪಕದಲ್ಲಿ ಅಳೆಯಲಾಗುತ್ತದೆ. ಇದು ಹಾವಿನ ವಿಷದ ಸಾಮರ್ಥ್ಯವನ್ನು ನಿರ್ಧರಿಸುತ್ತದೆ. ಬ್ರಿಸ್ಟಲ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕೆಮಿಸ್ಟ್ರಿಯ ವೆಬ್‌ಸೈಟ್ ಪ್ರಕಾರ, ಇನ್ಲ್ಯಾಂಡ್ ತೈಪಾನ್, ಮಾರಣಾಂತಿಕ ಹಾವುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಈ ಹಾವು ಒಮ್ಮೆ ಕಚ್ಚಿದ್ರೆ 100 ಕ್ಕಿಂತ ಹೆಚ್ಚು ಜನರನ್ನು ಕೊಲ್ಲಬಹುದಾದಷ್ಟು ವಿಷವನ್ನು ಹೊಂದಿದೆ. ಸುಮಾರು 250,000 ಇಲಿಗಳನ್ನು ಕೊಲ್ಲಲು ಈ ವಿಷ ಸಾಕಾಗುತ್ತದೆ. ಇನ್‌ಲ್ಯಾಂಡ್ ತೈಪಾನ್ ಅತ್ಯಂತ ವಿಷಕಾರಿ ಹಾವಾಗಿದ್ದರೂ ಶಾಂತ ಸ್ವಭಾವವನ್ನು ಹೊಂದಿದೆ.
ಏಕಾಂತವನ್ನು ಇದು ಇಷ್ಟಪಡುತ್ತದೆ. ಅದನ್ನು ಕೆರಳಿಸಿದರೆ ಅಥವಾ ಇನ್ಯಾವುದೇ ರೀತಿಯಲ್ಲಿ ತೊಂದರೆ ಕೊಟ್ಟರೆ ರಕ್ಷಣೆಗಾಗಿ ಪ್ರತಿದಾಳಿ ಮಾಡುತ್ತದೆ.