ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ ಕಪಟ ಬೀದಿ ನಾಟಕ. ಇದೆಲ್ಲವನ್ನೂ ಜನರು ಗಮನಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಈಗ ಪಾದಯಾತ್ರೆ ಮಾಡುತ್ತಿದ್ದವರು ಹಿಂದೆ 5 ವರ್ಷ ಅಧಿಕಾರದಲ್ಲಿದ್ದರು. ಆಗ ಯೋಜನೆ ಬಗ್ಗೆ ಏನೂ ಮಾಡಲಿಲ್ಲ. ಈಗ ಕಪಟ ಬೀದಿ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
5 ವರ್ಷ ಸರ್ಕಾರ ನಡೆಸಿದರು ಒಂದು ಡಿಪಿಆರ್ ಸಿದ್ಧಪಡಿಸಲು ಸಾಧ್ಯವಾಗಲಿಲ್ಲ, ಈಗ ಮೇಕೆದಾಟು ಪಾದಯಾತ್ರೆ ಹೆಸರಲ್ಲಿ ನಾಟಕವಾಡುತ್ತಿದ್ದಾರೆ. ಈ ಮೂಲಕ ಕಾವೇರಿ ತಾಯಿಗೆ ಅವಮಾನ ಮಾಡುತ್ತಿದ್ದಾರೆ. ಮೊದಲು ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮೇಕೆದಾಟು ಯೋಜನೆ ಬಿಜೆಪಿ ಸರ್ಕಾರವೇ ಜಾರಿಗೆ ತರಲಿದೆ. ಅದು ಕೂಡ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿಯೇ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.