ಇಡ್ಲಿ ಹಾಗೂ ದೋಸೆ ಜೊತೆ ಸಿಹಿ ಗೆಣಸಿನ ಚಟ್ನಿ ಒಳ್ಳೆ ಕಾಂಬಿನೇಷನ್. ಅನ್ನದ ಜೊತೆಗೂ ಇದನ್ನು ತಿನ್ನಬಹುದು. ತುಂಬಾ ವಿಶಿಷ್ಟವಾದ ಡಿಶ್ ಇದು. ಅದನ್ನು ಹೇಗೆ ಮಾಡೋದು ನೋಡೋಣ.
ಬೇಕಾಗುವ ಸಾಮಗ್ರಿ : ಮಧ್ಯಮ ಗಾತ್ರದ ಒಂದು ಸಿಹಿ ಗೆಣಸು, 2 ಚಮಚ ಉದ್ದಿನ ಬೇಳೆ, 3-5 ಕೆಂಪು ಮೆಣಸಿನಕಾಯಿ, ಸಣ್ಣ ನಿಂಬೆ ಹಣ್ಣಿನ ಗಾತ್ರದಷ್ಟು ಹುಣಸೆ ಹಣ್ಣು, 4 ಚಮಚ ಕಾಯಿ ತುರಿ, 2 ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ವಗ್ಗರಣೆಗೆ ಅರ್ಧ ಚಮಚ ಸಾಸಿವೆ, 1 ಕೆಂಪು ಮೆಣಸಿನಕಾಯಿ, ಚಿಟಿಕೆ ಇಂಗು, ನಾಲ್ಕಾರು ಕರಿಬೇವಿನ ಎಲೆ.
ಮಾಡುವ ವಿಧಾನ : ಸಿಹಿ ಗೆಣಸಿನ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ. ಬಾಣೆಲೆಯಲ್ಲಿ 1 ಚಮಚ ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಉದ್ದಿನ ಬೇಳೆ, ಕೆಂಪು ಮೆಣಸು, ಕರಿಬೇವು, ಇಂಗು ಹಾಕಿ ಹುರಿಯಿರಿ. ಉದ್ದಿನ ಬೇಳೆ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬಂದ ಬಳಿಕ ಗ್ಯಾಸ್ ಆಫ್ ಮಾಡಿ. ಅದು ತಣ್ಣಗಾದ ಬಳಿಕ ಹೆಚ್ಚಿದ ಸಿಹಿ ಗೆಣಸು, ಉಪ್ಪು, ಹುಣಸೆ ಹಣ್ಣು, ಕಾಯಿತುರಿ, ಸ್ವಲ್ಪ ನೀರು ಹಾಕಿ ರುಬ್ಬಿ.
ನಂತರ ಚಿಕ್ಕ ಕಬ್ಬಿಣ ಸೌಟಿನಲ್ಲಿ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಕಾದ ನಂತರ ಸಾಸಿವೆ ಹಾಕಿ ಚಟಪಟಾಯಿಸಿ. ನಂತರ ಕರಿಬೇವಿನ ಎಲೆ, ಕೆಂಪು ಮೆಣಸು, ಇಂಗು ಹಾಕಿದ ವಗ್ಗರಣೆಯನ್ನು ಚಟ್ನಿಗೆ ಹಾಕಿ ಅಲಂಕರಿಸಿದರೆ ಸಿಹಿ ಗೆಣಸಿನ ಚಟ್ನಿ ರೆಡಿ.