ಇಡ್ಲಿಗೆ ಸಾಂಬಾರು ಇದ್ದರೆ ಅದರ ರುಚಿನೇ ಬೇರೆ. ಆದರೆ ಹೇಗೆ ಮಾಡಿದ್ರೂ ಸಾಂಬಾರು ರುಚಿ ಬರಲ್ಲ ಎನ್ನುವವರು ಒಮ್ಮೆ ಈ ರೀತಿಯಾಗಿ ಸಾಂಬಾರು ಮಾಡಿ ನೋಡಿ ಸಖತ್ ಆಗಿರುತ್ತದೆ.
1 ಕಪ್ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿಕೊಂಡು 1 ಕಪ್ ನೀರು ಸೇರಿಸಿ 2 ವಿಷಲ್ ಕೂಗಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1/2 ಚಮಚ ಕೊತ್ತಂಬರಿ ಬೀಜ, ½ ಚಮಚ ಕಡಲೆಬೇಳೆ, 8 ಎಸಳು ಬೆಳ್ಳುಳ್ಳಿ, 5 ಕಾಳು ಮೆಂತೆ, ಮೆಣಿಸಿನಕಾಳು 5, 1 ಲವಂಗ, ಚಕ್ಕೆ ½ ತುಂಡು, 1 ಚಮಚ ಜೀರಿಗೆ, 4 ಒಣಮೆಣಸು, ಸ್ವಲ್ಪ ಕರಿಬೇವು, ಸಣ್ಣ ಪೀಸ್ ಹುಣಸೆಹಣ್ಣು, ಸ್ವಲ್ಪ ಎಣ್ಣೆ ಹಾಕಿ ಹದ ಉರಿಯಲ್ಲಿ ಫ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ.
ನಂತರ ಇದಕ್ಕೆ 1 ಟೊಮೆಟೊ, ¼ ಕಪ್ ತೆಂಗಿನಕಾಯಿ ತುರಿ ಹಾಕಿ ಸ್ವಲ್ಪ ಮಿಕ್ಸ್ ಮಾಡಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ¼ ಟೀ ಸ್ಪೂನ್ ಸಾಸಿವೆ, ¼ ಟೀ ಸ್ಪೂನ್ ಜೀರಿಗೆ ಹಾಕಿ ನಂತರ ಸ್ವಲ್ಪ ಈರುಳ್ಳಿ ಹಾಕಿ, 1 ಟೊಮೆಟೊ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರಗೆ ಮಿಕ್ಸ್ ಮಾಡಿಕೊಳ್ಳಿ. ರುಬ್ಬಿಟ್ಟುಕೊಂಡ ಮಸಾಲೆ ಸೇರಿಸಿ ಸ್ವಲ್ಪ ಹೊತ್ತು ಫ್ರೈ ಮಾಡಿಕೊಂಡು ನಿಮಗೆ ಬೇಕಾದಷ್ಟು ನೀರು ಸೇರಿಸಿ. ತುಂಬಾ ದಪ್ಪಗೆ ಹಾಗೂ ತುಂಬಾ ನೀರಾಗಿ ಮಾಡಬೇಡಿ. ಚೆನ್ನಾಗಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮೇಲುಗಡೆ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿದರೆ ರುಚಿಕರವಾದ ಇಡ್ಲಿ ಸಾಂಬಾರು ಸವಿಯಲು ಸಿದ್ಧ.