ಹೃದಯಾಘಾತಕ್ಕೆ ತುತ್ತಾಗಿ ಆಗುವ ಹಾನಿಯನ್ನು ಸರಿಪಡಿಸುವ ಜೆಲ್ ಒಂದನ್ನು ಬ್ರಿಟಿಷ್ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದು ಬಯೋಡೀಗ್ರೇಡೇಬಲ್ ಜೆಲ್ ಆಗಿದ್ದು, ಇದರಿಂದ ಜಗತ್ತಿನಾದ್ಯಂತ ಕೋಟ್ಯಾಂತರ ಜನರಿಗೆ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.
ಯುಕೆಯೊಂದರಲ್ಲೇ ಪ್ರತಿ ವರ್ಷ ಹೃದಯಾಘಾತಕ್ಕೆ ತುತ್ತಾಗಿ 1,00,000 ಕ್ಕೂ ಅಧಿಕ ಜನರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಅಂದರೆ ಪ್ರತಿ ಐದು ನಿಮಿಷಕ್ಕೆ ಒಬ್ಬರಿಗೆ ಹೃದಯಾಘಾತ ಸಂಭವಿಸುತ್ತಿದೆ.
ಇಂತಹ ಪ್ರಕರಣಗಳಿಂದ ಸಾವನ್ನಪ್ಪುವವರ ಸಂಖ್ಯೆಯೂ ಅಧಿಕವಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಹಲವು ವರ್ಷಗಳ ಸಂಶೋಧನೆ ನಂತರ ಹೃದಯಾಘಾತಕ್ಕೆ ತುತ್ತಾದ ನಂತರ ಹೃದಯಕ್ಕೆ ಆಗುವ ಹಾನಿಯನ್ನು ಸರಿಪಡಿಸುವ ಜೆಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಜೆಲ್ ಅನ್ನು ಚುಚ್ಚುಮದ್ದಿನ ರೂಪದಲ್ಲಿ ನೇರವಾಗಿ ಬಡಿದುಕೊಳ್ಳುತ್ತಿರುವ ಹೃದಯಕ್ಕೆ ನೀಡಬಹುದಾಗಿದೆ. ಈ ಚುಚ್ಚುಮದ್ದಿನ ಜೀವಕೋಶಗಳು ಹೊಸ ಅಂಗಾಂಶ ಬೆಳೆಯಲು ನೆರವಾಗುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.
ಇಲ್ಲಿಯವರೆಗೆ, ಹೃದಯ ವೈಫಲ್ಯದ ಅಪಾಯವನ್ನು ಕಡಿಮೆ ಮಾಡಲು ಕೋಶಗಳನ್ನು ಹೃದಯಕ್ಕೆ ಇಂಜೆಕ್ಟ್ ಮಾಡಿದಾಗ ಕೇವಲ 1% ರಷ್ಟು ಮಾತ್ರ ಬದುಕುಳಿಯುತ್ತಿದ್ದಾರೆ. ಆದರೆ, ಜೆಲ್ ಹೃದಯಕ್ಕೆ ಕಸಿ ಮಾಡಿದಾಗ ಕೋಶಗಳನ್ನು ಹಿಡಿದಿಟ್ಟುಕೊಳ್ಳುತ್ತದೆ.
ಬ್ರಿಟಿಷ್ ಹಾರ್ಟ್ ಫೌಂಡೇಶನ್ ನಡೆಸಿದ ಸಂಶೋಧನೆಯ ನೇತೃತ್ವ ವಹಿಸಿದ್ದ ಕ್ಯಾಥರಿನ್ ಕಿಂಗ್ ಅವರು ಈ ಬಗ್ಗೆ ಮಾತನಾಡಿ, “ಈ ಹೊಸ ತಂತ್ರಜ್ಞಾನವು ಹೃದಯಾಘಾತದ ನಂತರ ವಿಫಲವಾದ ಹೃದಯಗಳನ್ನು ಸರಿಪಡಿಸಲು ಸಹಾಯ ಮಾಡುವ ಸಾಮರ್ಥ್ಯ ಹೊಂದಿದೆ’’ ಎಂದು ತಿಳಿಸಿದ್ದಾರೆ.
“ಹಾನಿಗೊಳಗಾದ ಹೃದಯವನ್ನು ಸರಿಪಡಿಸಲು ಸಹಾಯ ಮಾಡಲು ನಡೆಸುವ ಕೋಶಾಧಾರಿತ ಚಿಕಿತ್ಸೆಗಳಿಗೆ ಈ ಜೆಲ್ ಪರಿಣಾಮಕಾರಿಯಾಗಲಿದೆ ಎಂಬ ವಿಶ್ವಾಸ ನಮಗೆ ಇದೆ’’ ಎಂದೂ ಅವರು ಹೇಳಿದ್ದಾರೆ.