ವೈದ್ಯ ಮತ್ತು ದಂತ ವೈದ್ಯ ಕೋರ್ಸ್ ಗಳ ಪ್ರವೇಶಕ್ಕಾಗಿ ಇಂದು ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ತಮಿಳು, ತೆಲುಗು, ಉರ್ದು, ಪಂಜಾಬಿ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶವಿದ್ದು, ಮಧ್ಯಾಹ್ನ 2 ರಿಂದ ಸಂಜೆ 5:20ರ ವರೆಗೆ ಪರೀಕ್ಷೆ ನಡೆಯಲಿದೆ.
ವಿದ್ಯಾರ್ಥಿಗಳು ಮಧ್ಯಾಹ್ನ 12:30 ರೊಳಗೆ ತಮಗೆ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕಿದ್ದು, ಪ್ರವೇಶ ಪತ್ರದ ಜೊತೆಗೆ ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್, ಪಾನ್ ಕಾರ್ಡ್, ವಾಹನ ಚಾಲನಾ ಪರವಾನಿಗೆ ಸೇರಿದಂತೆ ಸರ್ಕಾರ ನೀಡಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕಿದೆ.
ವಿದ್ಯಾರ್ಥಿಗಳು ಅರ್ಧ ತೋಳಿನ ಉಡುಪು ಧರಿಸಲು ಅವಕಾಶವಿದ್ದು, ತುಂಬು ತೋಳಿನ ವಸ್ತ್ರಗಳಿಗೆ ಅವಕಾಶವಿರುವುದಿಲ್ಲ. ಅಲ್ಲದೆ ಶೂ ಗಳಿಗೆ ಅನುಮತಿ ಇರುವುದಿಲ್ಲ. ಹೀಗಾಗಿ ಚಪ್ಪಲಿ ಧರಿಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿದೆ.
ಎಲೆಕ್ಟ್ರಾನಿಕ್ ವಸ್ತುಗಳು, ಕ್ಯಾಲ್ಕುಲೇಟರ್, ಮೊಬೈಲ್ ಫೋನ್, ವಾಚ್, ಆಭರಣಗಳಿಗೆ ನಿಷೇಧ ಹೇರಲಾಗಿದ್ದು, ಮಧುಮೇಹದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಶುಗರ್ ಟ್ಯಾಬ್ಲೆಟ್/ ಹಣ್ಣುಗಳು (ಬಾಳೆಹಣ್ಣು, ಸೇಬು, ಕಿತ್ತಳೆ) ಹಾಗೂ ಪಾರದರ್ಶಕ ನೀರಿನ ಬಾಟಲಿ ತೆಗೆದುಕೊಂಡು ಹೋಗಬಹುದಾಗಿದೆ.