ರೈತಾಪಿ ವರ್ಗದಲ್ಲಿ ಮಿನಿ ಸಂಕ್ರಾಂತಿ ಎಂದೆ ಕರೆಯಲ್ಪಡುವ ಮಣ್ಣೆತ್ತಿನ ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಣ್ಣಿನಲ್ಲಿ ಮಾಡಿದ ಎತ್ತುಗಳನ್ನು ಪೂಜಿಸಲಾಗುತ್ತದೆ.
ಮುಂಗಾರು ಹಂಗಾಮಿನ ಮೊದಲ ಹಬ್ಬ ಇದಾಗಿದ್ದು, ಬಿತ್ತನೆ ಆರಂಭದಿಂದಲೂ ಸುಗ್ಗಿಯ ಕಾಲದವರೆಗೆ ಜೊತೆಯಾಗಿ ದುಡಿಯುವ ಎತ್ತುಗಳನ್ನು ರೈತರು ಪೂಜಿಸುತ್ತಾರೆ.
ಅಮವಾಸ್ಯೆಗೆ ಇನ್ನೂ ಕೆಲವು ದಿನಗಳಿರುವಾಗಲೇ ಮಣ್ಣಿನ ಎತ್ತುಗಳನ್ನು ಸಿದ್ಧಪಡಿಸಲಾಗುತ್ತದೆ. ಮಾರುಕಟ್ಟೆಯಲ್ಲಿ 50 ರೂ.ವರೆಗೂ ಮಣ್ಣಿನ ಎತ್ತುಗಳಿಗೆ ಬೆಲೆ ಇದೆ
ಮಣ್ಣಿನ ಅಮವಾಸ್ಯೆ, ಮಣ್ಣೆತ್ತಿನ ಅಮವಾಸ್ಯೆ ಎಂದು ಕರೆಯಲ್ಪಡುವ ಈ ದಿನ ಕಾರ ಹುಣ್ಣಿಮೆಯ ಬಳಿಕ ಬರುತ್ತದೆ. ಬಿತ್ತನೆ ಕಾಲವಾಗಿರುವುದರಿಂದ ಕೃಷಿ ಪರಿಕರಗಳು, ಎತ್ತುಗಳನ್ನು ಪೂಜಿಸಲಾಗುತ್ತದೆ. ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಲಾಗುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಮಣ್ಣಿನ ಅಮವಾಸ್ಯೆಯನ್ನು ವಿಶೇಷವಾಗಿ ಆಚರಿಸುತ್ತಾರೆ. ಮನೆ ಮಂದಿಯೆಲ್ಲಾ ಒಟ್ಟಿಗೆ ಸೇರಿಕೊಂಡು ಎತ್ತುಗಳನ್ನು ಶೃಂಗರಿಸಿ ಪೂಜಿಸುತ್ತಾರೆ.