ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಎಲ್ಲರಂತೆ ಅವರಿಗೆ ಅವಕಾಶಗಳನ್ನು ನೀಡುವುದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಉದ್ದೇಶವಾಗಿದೆ. ಈ ದಿನವು ಲಿಂಗ ಆಧಾರಿತ ಪಕ್ಷಪಾತಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ, ಪ್ರೋತ್ಸಾಹ, ಅಧಿಕಾರ! ಒದಗಿಸುವುದೆ ಇದರ ಮೂಲಧ್ಯೇಯವಾಗಿದೆ.
ಈ ದಿನವನ್ನು ಆಚರಿಸುವ ಇನ್ನೊಂದು ಉದ್ದೇಶವೆಂದರೆ ಹೆಣ್ಣು ಮಗು ಎದುರಿಸುವ ಅಸಮಾನತೆಗಳ ಬಗ್ಗೆ ಜಾಗೃತಿ ಮೂಡಿಸುವುದು. ಹೆಣ್ಣುಮಕ್ಕಳ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು. ಹೆಣ್ಣುಮಕ್ಕಳ ಬಗೆಗಿನ ಸಮಾಜದ ಮನೋಭಾವವನ್ನು ಬದಲಾಯಿಸುವುದು, ಹೆಣ್ಣು ಭ್ರೂಣಹತ್ಯೆಗಳನ್ನು ಕಡಿಮೆ ಮಾಡುವುದು ಮತ್ತು ಲಿಂಗ ಅನುಪಾತದ ಬಗ್ಗೆ ಜಾಗೃತಿ ಮೂಡಿಸುವುದು.
ಹೆಣ್ಣು ಮಕ್ಕಳ ಸ್ಥಿತಿಗತಿ ಸುಧಾರಿಸಲು ಸರ್ಕಾರ ಕೈಗೊಂಡ ಕ್ರಮಗಳು
ಭಾರತ ಸರ್ಕಾರವು ಹೆಣ್ಣುಮಕ್ಕಳ ಸ್ಥಿತಿಯನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹೆಣ್ಣು ಮಗುವನ್ನು ಉಳಿಸಿ(Save the girl child), ಬೇಟಿ ಬಚಾವೋ ಬೇಟಿ ಪಡಾವೋ, ಸುಕನ್ಯಾ ಸಮೃದ್ಧಿ ಯೋಜನೆ CBSE ಉಡಾನ್ ಯೋಜನೆ, ಹೆಣ್ಣು ಮಗುವಿಗೆ ಉಚಿತ ಅಥವಾ ಅನುದಾನಿತ ಶಿಕ್ಷಣ, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಮತ್ತು ಮಾಧ್ಯಮಿಕ ಬಾಲಕಿಯರಿಗೆ ರಾಷ್ಟ್ರೀಯ ಪ್ರೋತ್ಸಾಹಕ ಯೋಜನೆ ಸೇರಿದಂತೆ ಹಲವಾರು ಅಭಿಯಾನಗಳು ಮತ್ತು ಕಾರ್ಯಕ್ರಮಗಳನ್ನು ಈ ಕಾರ್ಯಕ್ರಮದ ಅಡಿಯಲ್ಲಿ ಪ್ರಾರಂಭಿಸಿದೆ.
ಈ ದಿನದ ಪ್ರಾಮುಖ್ಯತೆ ಬಗ್ಗೆ ವಿವರಿಸಿ ಟ್ವೀಟ್ ಮಾಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಇಂದು, ‘ಕನ್ಯಾ ಮಹೋತ್ಸವ’ ಎಂಬ ಆನ್ ಲೈನ್ ಕಾರ್ಯಕ್ರಮದಲ್ಲಿ ದೇಶಾದ್ಯಂತದ ಕೆಲವು ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವು ಸಹ ವರ್ಚುವಲ್ ಚರ್ಚೆಯನ್ನ ಆಯೋಜಿಸಿದೆ.