
ಮದುವೆಗಳು ನಡೆಯುವ ಸಂದರ್ಭದಲ್ಲಿ ವರ – ವಧುವಿನ ಪ್ರಿಯತಮೆ ಅಥವಾ ಪ್ರಿಯತಮ ಅಡ್ಡಿಪಡಿಸಿ ಮದುವೆ ನಿಲ್ಲಿಸಿರುವ ಅನೇಕ ಘಟನೆಗಳನ್ನು ನೋಡಿದ್ದೀರಿ, ಕೇಳಿದ್ದೀರಿ. ಕೆಲವೊಂದು ಘಟನೆಗಳು ಹೀಗೆ ಬಂದ ಪ್ರಿಯತಮೆ ಅಥವಾ ಪ್ರಿಯಕರನ್ನು ಮದುವೆಯಾಗುವ ಮೂಲಕ ಸುಖಾಂತ್ಯ ಕಂಡರೆ ಮತ್ತೆ ಕೆಲವು ಮದುವೆಗಳು ಮುರಿದುಬಿದ್ದಿವೆ.
ಆದರೆ ಇಲ್ಲೊಂದು ಪ್ರಕರಣದಲ್ಲಿ ನೀವು ಊಹಿಸಲಾಗದ ಘಟನೆ ನಡೆದಿದೆ. ಬಿಹಾರದ ಸರನ್ ನಲ್ಲಿ ಈ ಘಟನೆ ನಡೆದಿದ್ದು, ತನ್ನ ಸಹೋದರಿಯೊಂದಿಗೆ ಮದುವೆಯಾಗುತ್ತಿದ್ದ ವರನನ್ನೇ ತಂಗಿ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಮದುವೆ ವಿಧಿ ವಿಧಾನಗಳು ನಡೆಯುತ್ತಿದ್ದ ವೇಳೆ ಅಲ್ಲಿಯವರೆಗೆ ಸುಮ್ಮನಿದ್ದು ಬಳಿಕ ಆಕೆಯ ಎಂಟ್ರಿ ಆಗಿದೆ.
ವರ ರಾಜೇಶ್ ತನ್ನೊಂದಿಗೆ ಮದುವೆಯಾಗದಿದ್ದರೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಧುವಿನ ಸಹೋದರಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಕುಟುಂಬಸ್ಥರು ಸೇರಿದಂತೆ ಮದುವೆಗೆ ಬಂದವರು ತಬ್ಬಿಬ್ಬಾಗಿದ್ದಾರೆ. ಕೊನೆಗೂ ವಧು ರಿಂಕು ತಂಗಿಯ ಬೆದರಿಕೆಗೆ ಮಣಿದ ವರ ರಾಜೇಶ್ ಕುಟುಂಬಸ್ಥರ ಸಮ್ಮತಿಯೊಂದಿಗೆ ಆಕೆಯನ್ನು ಮದುವೆಯಾಗಿದ್ದಾನೆ.