2022 ರ ಡಿಸೆಂಬರ್ 10 ರಂದು ಚೆನ್ನೈನಿಂದ ತಿರುಚನಾಪಳ್ಳಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಪ್ರಯಾಣಿಕರು ತೆರೆದಿದ್ದರೂ ಎನ್ನಲಾದ ಘಟನೆ ಕುರಿತಂತೆ ತನಿಖೆಗೆ ಡಿಜಿಸಿಎ ಆದೇಶಿಸಿದೆ.
ಇದರ ಮಧ್ಯೆ ಟ್ವೀಟ್ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ, ಅಂದು ವಿಮಾನದ ತುರ್ತು ನಿರ್ಗಮನದ ದ್ವಾರವನ್ನು ತೆರೆದಿದ್ದು ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಡಿಜಿಸಿಎ ತನಿಖೆಗೆ ಆದೇಶಿಸಿರುವ ಕುರಿತಂತೆ ವ್ಯಂಗ್ಯವಾಡಿರುವ ಅವರು, ಬಿಜೆಪಿಯವರು ಪ್ರಭಾವಿ ವ್ಯಕ್ತಿಗಳು ಅವರ ಮೇಲೆ ತನಿಖೆ ನಡೆಸಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೆ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಡಿಎಂಕೆ ನಾಯಕರು, ತುರ್ತು ನಿರ್ಗಮನ ದ್ವಾರ ತೆರೆದ ಘಟನೆ ನಡೆದ ದಿನದಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಹಾಗೂ ಸಂಸದ ತೇಜಸ್ವಿ ಸೂರ್ಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ರೀತಿ ಮಾಡಿದ ಬಳಿಕ ಅವರುಗಳನ್ನು ಅರ್ಧ ಗಂಟೆಗಳ ಕಾಲ ವಿಮಾನ ನಿಲ್ದಾಣದ ಬಸ್ ನಲ್ಲಿ ಕೂರಿಸಲಾಗಿತ್ತು ಎಂದಿದ್ದಾರೆ.