ಇಂಟರ್ನೆಟ್ ಸೆನ್ಸೇಶನ್ ಕಿಡ್ ಐಡಲ್ ಎಸ್.ಕೆ. ಶಾಹಿದ್ ಮಾಡಿದ ಕ್ರಿಕೆಟ್ ಅಭ್ಯಾಸದ ವಿಡಿಯೋವನ್ನು ಬಾಲಕನ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಅಭಿಮಾನಿಯಾಗಿರುವ ಐದು ವರ್ಷದ ಶಾಹೀದ್ ಜೀವನವನ್ನೇ ಇದು ಬದಲಾಯಿಸಿದೆ.
ಶಾಹೀದ್ ಇತ್ತೀಚೆಗೆ ಮೇಸ್ಟ್ರೋ ಅವರೊಂದಿಗೆ ಐದು ದಿನಗಳ ತರಬೇತಿಯನ್ನು ಪಡೆದಿದ್ದಾನೆ. ಶಾಹಿದ್ ತಂದೆ ಹೇರ್ ಸಲೂನ್‌ನಲ್ಲಿ ಕೆಲಸ ಮಾಡುತ್ತಾರೆ. ಪುತ್ರನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಇದು ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನವನ್ನು ಸೆಳೆದಿದೆ. ಸಚಿನ್ ತೆಂಡೂಲ್ಕರ್ ಶಾಹೀದ್ ನ ರೋಲ್ ಮಾಡೆಲ್. ಬಾಲಕನಿಗೆ ಕ್ರಿಕೆಟ್ ದೇವರನ್ನು ಒಮ್ಮೆಯಾದ್ರೂ ಭೇಟಿ ಮಾಡಬೇಕು ಎಂದ ಅದಮ್ಯ ಕನಸಿತ್ತು. ಅದೃಷ್ಟವಶಾತ್ ಈತನಿಗೆ ಈ ಅವಕಾಶ ತಾನಾಗೇ ಒಲಿದು ಬಂದಿದೆ.
ಶಾಹೀದ್ ನ ವಿಡಿಯೋವನ್ನು ಆಸ್ಟ್ರೇಲಿಯಾದ ಫಾಕ್ಸ್ ಕ್ರಿಕೆಟ್ ಚಾನೆಲ್ ಟ್ವೀಟ್ ಮಾಡಿತ್ತು. ಜೊತೆಗೆ ತೆಂಡೂಲ್ಕರ್, ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಮತ್ತು ದಿವಂಗತ ಶೇನ್ ವಾರ್ನ್ ಅವರನ್ನು ಟ್ಯಾಗ್ ಮಾಡಲಾಗಿತ್ತು. ಈ ವಿಡಿಯೋವನ್ನು ನೋಡಿದ್ದ ಶೇನ್ ವಾರ್ನ್ ಬಾಲಕನ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದರು.
ಇನ್ನು ಶಾಹಿದ್ ಮತ್ತು ಆತನ ಕುಟುಂಬ ಮುಂಬೈಗೆ ಭೇಟಿ ನೀಡಿದಾಗ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ಎಲ್ಲಾ ಖರ್ಚುಗಳನ್ನು ನೋಡಿಕೊಂಡಿದ್ದಾರೆ. ಜೊತೆಗೆ ಅತಿಥಿಗೃಹದಲ್ಲಿ ಅವರ ವಾಸ್ತವ್ಯಕ್ಕೆ ವ್ಯವಸ್ಥೆಯನ್ನು ಕೂಡ ಮಾಡಿದ್ದರು. ಶಾಹಿದ್ ಅವರ ತಂದೆ ತನ್ನ ಮಗನಿಗೆ ವೃತ್ತಿಪರ ತರಬೇತಿಯನ್ನು ನೀಡಬೇಕೆಂದು ಬಯಸಿದ್ದರು. ಇದೀಗ ತೆಂಡೂಲ್ಕರ್ ಆ ಆಸೆಯನ್ನು ಪೂರೈಸಿದ್ದಾರೆ.
ಬಾಲಕನನ್ನು ಅಕಾಡೆಮಿಗೆ ಕರೆದೊಯ್ದ ಸಚಿನ್, ಅಲ್ಲಿ ಈಜು ಸೇರಿದಂತೆ ಇತರ ಚಟುವಟಿಕೆಗಳ ಜೊತೆಗೆ ಐದು ದಿನಗಳ ಕಾಲ ತರಬೇತಿ ನೀಡಿದ್ದಾರೆ. ದಿನಚರಿ ಮತ್ತು ವೇಳಾಪಟ್ಟಿಯನ್ನು ಸಹ ನೀಡಲಾಗಿದ್ದು ಇನ್ಮುಂದೆ ತಮ್ಮ ಮನೆಯಲ್ಲೇ ಬಾಲಕ ಅಭ್ಯಾಸ ಮಾಡುತ್ತಾನೆ ಎಂದು ಆತನ ತಂದೆ ಶೇಖ್ ತಿಳಿಸಿದ್ದಾರೆ.
ಶಾಹೀದ್ ಗೆ ಯಾವ ರೀತಿ ಆಡಬೇಕು ಎಂಬುದನ್ನು ಸಚಿನ್ ತೋರಿಸಿಕೊಟ್ಟಿದ್ದಾರೆ. ಬಾಲಕನಿಗೆ ಪ್ರತಿಭೆಯಿದ್ದು, ಮುಂದೊಂದು ದಿನ ಆತ ದೊಡ್ಡಮಟ್ಟದಲ್ಲಿ ಬೆಳೆಯುತ್ತಾನೆ ಎಂದು ಸಚಿನ್ ಹೇಳಿದ್ದಾಗಿ ಶೇಖ್ ತಿಳಿಸಿದ್ದಾರೆ.