ಶಿವಮೊಗ್ಗ: ಆ. 9 ರಿಂದ 14 ರವರೆಗೆ ಮನೆ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಸಾರ್ವಜನಿಕರಲ್ಲಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಮನವಿ ಮಾಡಿದೆ.
ಇಂದು ಮೀಡಿಯಾ ಹೌಸ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್, ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸುಮಾರು 594 ರಾಜ್ಯ ಸಂಸ್ಥಾನಗಳಿದ್ದವು. ಅವುಗಳನ್ನೆಲ್ಲಾ ಒಕ್ಕೂಟಕ್ಕೆ ಸೇರಿಸಿಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಮತ್ತು ಸಮೃದ್ಧ ದೇಶ ಮೈಸೂರು ದೇಶವಾಗಿತ್ತು. ಆಗಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಸರ್ಧಾರ್ ವಲ್ಲಭ ಭಾಯ್ ಪಟೇಲ್ ಅವರು ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಮನವಿ ಮಾಡಿದರು. ಮಹಾರಾಜರು ಮೈಸೂರು ದೇಶವನ್ನು ಭಾರತದ ಒಕ್ಕೂಟದೊಂದಿಗೆ ಸೇರಿಸಲು ಒಪ್ಪಿಕೊಂಡು ಸಹಿ ಮಾಡಿದರು. ಆ ಸಹಿ ಮಾಡಿದ ದಿನವೇ 1947 ರ ಆಗಸ್ಟ್ 9 ಆಗಿತ್ತು ಎಂದರು.
ಅದರ ನೆನಪಿಗಾಗಿಯೇ ಆ. 9 ರಿಂದ 14 ರವರೆಗೆ ಕನ್ನಡಿಗರ ತ್ಯಾಗದ ಮತ್ತು ಪ್ರತಿಷ್ಠೆಯ ಹಾಗೂ ಸ್ವಾಯತ್ತತೆಯ ಪ್ರತೀಕವಾಗಿ ಕನ್ನಡ ನಾಡಿನ ಪ್ರತಿ ಮನೆ, ಅಂಗಡಿಗಳು, ಕಟ್ಟಡಗಳು, ವಾಹನಗಳ ಮೇಲೆ ಕನ್ನಡ ಬಾವುಟ ಹಾರಿಸುವ ಮೂಲಕ ಕನ್ನಡದ ಸಮಗ್ರತೆಯನ್ನು ರಾಷ್ಟ್ರಕ್ಕೆ, ವಿಶ್ವಕ್ಕೇ ತೋರಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ಪ್ರಜೆ ಪಾಲ್ಗೊಂಡು ಕನ್ನಡ ಬಾವುಟ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ರವಿಕುಮಾರ್, ಗ್ರಾಮಾಂತರ ಅಧ್ಯಕ್ಷ ಫ್ರಾಕ್ಲಿನ್ ಸಾಲೋಮನ್, ಕಾರ್ಯದರ್ಶಿ ರಾಘವೇಂದ್ರ ಇದ್ದರು.