ಮಾವಿನ ಹಣ್ಣುಗಳು ಹಾಗೆಯೇ ತಿನ್ನಲು ಎಷ್ಟು ರುಚಿಯೋ ಹಾಗೆಯೇ ಅದರಿಂದ ತಯಾರಿಸಿದ ಪದಾರ್ಥಗಳೂ ರುಚಿಯಾಗಿರುತ್ತವೆ. ಮಾವಿನ ಹಣ್ಣಿನ ಪಲ್ಯ ಅಥವಾ ಗ್ರೇವಿಯನ್ನು ಮಾಡಲು ಸ್ವಲ್ಪ ಹುಳಿ-ಸಿಹಿ ಮಿಶ್ರವಾಗಿರುವ ಚಿಕ್ಕ-ಚಿಕ್ಕ ಹಣ್ಣುಗಳು ಅಗತ್ಯವಿರುತ್ತವೆ.
ಈ ಪಲ್ಯವನ್ನು ನಿಮ್ಮ ರುಚಿಗೆ ಅನುಸಾರವಾಗಿ ಸಿಹಿ, ಖಾರ, ಹುಳಿಯಾಗಿ ತಯಾರಿಸಿಕೊಳ್ಳಬಹುದು.
ಬೇಕಾಗುವ ಸಾಮಾಗ್ರಿಗಳು
ಮಾವಿನ ಹಣ್ಣು – 8-10
ಎಣ್ಣೆ – 2 ಚಮಚ
ಸಾಸಿವೆ – 1 ಚಮಚ
ಉದ್ದಿನಬೇಳೆ – 1 ಚಮಚ
ಕೆಂಪು ಮೆಣಸು – 1
ಹಸಿಮೆಣಸು – 1
ಕರಿಬೇವು – ಸ್ವಲ್ಪ
ಇಂಗು – 1/2
ಅರಿಶಿಣ – 1/2 ಚಮಚ
ಉಪ್ಪು – ರುಚಿಗೆ
ಬೆಲ್ಲ – 1/2 ಕಪ್
ಮಾಡುವ ವಿಧಾನ
ಸ್ವಲ್ಪ ಹುಳಿ-ಸಿಹಿಯಿರುವ ಚಿಕ್ಕ ಚಿಕ್ಕ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ತೊಳೆದುಕೊಳ್ಳಿ. ನಂತರ ಅವುಗಳ ತೊಟ್ಟಿನ ಭಾಗವನ್ನು ಕತ್ತರಿಸಿ. ಈಗ ಹಣ್ಣುಗಳನ್ನು ನಾಲ್ಕು ಮೂಲೆಯಲ್ಲಿ ಸಿಗಿದು ಅರ್ಧ-ಅರ್ಧ ಬಿಡಿಸಿಡಿ. ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಸ್ವಲ್ಪ ಬಿಸಿಯಾದ ನಂತರ 2 ಚಮಚ ಎಣ್ಣೆ ಹಾಕಿ. ನಂತರ 1 ಚಮಚ ಸಾಸಿವೆ ಹಾಕಿ ಅದು ಸಿಡಿಯಲು ಆರಂಭವಾದಾಗ 1 ಚಮಚ ಉದ್ದಿನಬೇಳೆ, 1 ಕತ್ತರಿಸಿದ ಕೆಂಪು ಮೆಣಸು, 1/2 ಚಮಚ ಇಂಗು, ಕರಿಬೇವಿನ ಎಲೆಯನ್ನು ಹಾಕಿ ಹುರಿಯಿರಿ.
ಈಗ ಅದಕ್ಕೆ 1/2 ಚಮಚ ಅರಿಶಿಣ, 1 ಕತ್ತರಿಸಿದ ಹಸಿಮೆಣಸನ್ನು ಹಾಕಿ ಹುರಿದ ನಂತರ 1 ಕಪ್ ನೀರನ್ನು ಹಾಕಿ. ನಂತರ 1/2 ಕಪ್ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೆಲ್ಲ ಕರಗುವವರೆಗೆ ಕುದಿಸಿ.
2-3 ನಿಮಿಷಗಳ ನಂತರ ಅರ್ಧ ಸಿಪ್ಪೆ ಸುಲಿದ ಮಾವಿನ ಹಣ್ಣುಗಳನ್ನು ಈ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಧ್ಯಮ ಉರಿಯಲ್ಲಿ ಬೇಯಿಸಿದರೆ ರುಚಿಯಾದ ಮಾವಿನ ಹಣ್ಣಿನ ಪಲ್ಯ ಅಥವಾ ಗ್ರೇವಿ ಸಿದ್ಧವಾಗುತ್ತದೆ. ಇದನ್ನು ಅನ್ನ, ಚಪಾತಿ ಅಥವಾ ದೋಸೆಯೊಂದಿಗೆ ಸೇವಿಸಬಹುದು.