ಆಹಾರದ ರುಚಿ ಹೆಚ್ಚಿಸಲು ಅದಕ್ಕೆ ನಾವು ಮಸಾಲೆ ಪದಾರ್ಥಗಳನ್ನು ಹಾಕ್ತೇವೆ. ಮಸಾಲೆ ಜೊತೆ ಉಪ್ಪು ಹಾಕದೆ ಹೋದ್ರೆ ಆಹಾರ ರುಚಿಕರವಾಗುವುದಿಲ್ಲ. ಹಾಗಂತ ಆಹಾರಕ್ಕೆ ಹೆಚ್ಚು ಉಪ್ಪು ಹಾಕಿದ್ರೂ ಆಹಾರ ರುಚಿ ಕಳೆದುಕೊಳ್ಳುತ್ತದೆ. ಆಹಾರಕ್ಕೆ ಸಮ ಪ್ರಮಾಣದಲ್ಲಿ ಉಪ್ಪನ್ನು ಹಾಕಬೇಕು.
ಕಡಿಮೆ ಉಪ್ಪು ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದರೆ ಓಕೆ. ಇಲ್ಲವೆಂದ್ರೆ ನೀವಾಗಿಯೇ ಅತಿ ಕಡಿಮೆ ಉಪ್ಪು ಸೇವನೆ ಮಾಡ್ತಿದ್ದರೆ ಇದನ್ನು ತಕ್ಷಣ ಬಿಡಿ. ಹೀಗೆ ಮಾಡಿದ್ರೆ ಕಡಿಮೆ ರಕ್ತದೊತ್ತಡ ಸಮಸ್ಯೆ ಉಂಟಾಗುತ್ತದೆ. ಟೈಪ್ 2 ಡಯಾಬಿಟಿಸ್‌ಗೆ ಬಲಿಯಾಗಬಹುದು. ದಣಿವು ಮತ್ತು ಸೋಮಾರಿತ ಕಾಡಬಹುದು. ದೇಹಕ್ಕೆ ಅಗತ್ಯವಿರುವಷ್ಟು ಉಪ್ಪನ್ನು ಸೇವಿಸಬೇಕಾಗುತ್ತದೆ.
ಅನೇಕರು ಇದಕ್ಕೆ ವಿರುದ್ಧವಾಗಿರುತ್ತಾರೆ. ಹೆಚ್ಚು ಉಪ್ಪನ್ನು ಸೇವಿಸುತ್ತಾರೆ. ಆಹಾರ ತಯಾರಿಸುವ ವೇಳೆ ಹೆಚ್ಚು ಉಪ್ಪು ಹಾಕ್ತಾರೆ. ಇದು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡ, ರಕ್ತದೊತ್ತಡ, ಹೃದಯ ಸಂಬಂಧಿತ ಕಾಯಿಲೆಗಳು ಮತ್ತು ಮೂಳೆ ಸಮಸ್ಯೆಗಳು ಕಾಡುತ್ತವೆ.
ಉಪ್ಪಿನಲ್ಲೂ ಸಾಕಷ್ಟು ವಿಧವಿದೆ. ಹಿಮಾಲಯನ್ ಉಪ್ಪು ಹಾಗೂ ಸೀ ಉಪ್ಪನ್ನು ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಎರಡೂ ಅನೇಕ ಪೌಷ್ಟಿಕಾಂಶವನ್ನು ಹೊಂದಿದೆ. ಎಲ್ಲಾ ಉಪ್ಪಿನಲ್ಲಿ ಸೋಡಿಯಂ ಇರುತ್ತದೆ. ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಸೋಡಿಯಂ ಇರಬೇಕು.
ಊಟದ ವೇಳೆ ಉಪ್ಪು ತಿನ್ನುವವರಿದ್ದಾರೆ. ಆಹಾರಕ್ಕೆ ಉಪ್ಪು ಕಡಿಮೆಯಾಗಿದ್ದರೆ ಉಪ್ಪು ಬೆರೆಸಿ ತಿನ್ನಬಹುದು. ಉಪ್ಪು ಸರಿಯಾಗಿದ್ದರೂ ಕೆಲವರು ಪ್ರತ್ಯೇಕವಾಗಿ ಉಪ್ಪನ್ನು ಊಟದ ಮಧ್ಯೆ ಹಾಕಿಕೊಳ್ತಾರೆ. ಇದು ತಪ್ಪು. ಇದು ಆರೋಗ್ಯವನ್ನು ಹಾಳು ಮಾಡುತ್ತದೆ. ಅಡುಗೆ ಮಾಡಿದ ನಂತ್ರ ರುಚಿ ನೋಡಿ ಉಪ್ಪು ಕಡಿಮೆಯಾದಲ್ಲಿ ಮಾತ್ರ ಹಾಕಿ.