ಬಾಲಸೋರ್: ಪತ್ರಕರ್ತರೊಬ್ಬರು ಚಿಕಿತ್ಸೆ ಪಡೆಯುತ್ತಿರುವಾಗ ಆಸ್ಪತ್ರೆಯ ಬೆಡ್‌ಗೆ ಅವರನ್ನು ಸರಪಳಿಯಿಂದ ಬಂಧಿಸಿರುವ ಆಘಾತಕಾರಿ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ವಾಹನಗಳು ಡಿಕ್ಕಿ ಹೊಡೆದ ನಂತರ ಹೋಮ್ ಗಾರ್ಡ್‌ನೊಂದಿಗೆ ವಾಗ್ವಾದ ನಡೆಸಿದ ಅವರನ್ನು ಬಂಧಿಸಲಾಯಿತು. ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಮಲಗಿದ್ದಲ್ಲೇ ಕೈ, ಕಾಲುಗಳಿಗೆ ಕೋಳಗಳಿಂದ ಕಟ್ಟಲಾಗಿದೆ. ಆಸ್ಪತ್ರೆಯ ಬೆಡ್‌ಗೆ ಕಬ್ಬಿಣದ ಸರಪಳಿಯಿಂದ ಕಟ್ಟಿ ಪತ್ರಕರ್ತ ಲೋಕನಾಥ್ ದಲೇಯಿ ಮಲಗಿರುವುದರ ಫೋಟೋ ವೈರಲ್ ಆಗಿದೆ.
ಮೂಲಗಳ ಪ್ರಕಾರ, ಗೃಹರಕ್ಷಕ ದಳದ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅವರನ್ನು ನೀಲಗಿರಿ ಪೊಲೀಸರು ವಿಚಾರಣೆಗೆ ಕರೆಸಿದ್ದರು ಎನ್ನಲಾಗಿದೆ. ನಂತರ ಠಾಣೆಯಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರನ್ನು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಲ್ಲೇ ಸರಪಳಿಯಿಂದ ಕಟ್ಟಿ ಹಾಕಲಾಗಿದೆ.
ಗೃಹ ರಕ್ಷಕ ದಳದ ಸಿಬ್ಬಂದಿ ನಿರಂಜನ್ ರಾಣಾ ಅವರು ನೀಲಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕರ್ತವ್ಯದಲ್ಲಿದ್ದಾಗ ಲೋಕನಾಥ್ ತನ್ನನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿ, ಹಲ್ಲೆ ಮಾಡಿದ್ದಲ್ಲದೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದರು.
ಸ್ಥಳೀಯ ಮಾಧ್ಯಮ ಸಂಸ್ಥೆಯೊಂದರಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸುತ್ತಿರುವ ಲೋಕನಾಥ್, ಬ್ರೌನ್ ಶುಗರ್ ಕಳ್ಳಸಾಗಣೆ ತಡೆಯುವಲ್ಲಿ ವಿಫಲವಾದ ಸುದ್ದಿಯನ್ನು ಪ್ರಕಟಿಸಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ತನ್ನ ಬಂಧನವಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು, ಪತ್ರಕರ್ತನ ವಿರುದ್ಧ ಪೊಲೀಸ್ ದೌರ್ಜನ್ಯವನ್ನು ಖಂಡಿಸಿದ ಒಡಿಶಾದ ಹಿರಿಯ ಪತ್ರಕರ್ತರು, ಇದಕ್ಕೆ ಕಾರಣರಾದ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಫೋಟೋ ವೈರಲ್ ಆದ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗಿದೆ.