ನ್ಯೂಯಾರ್ಕ್: ಅಮೆರಿಕಾದಲ್ಲಿ ಆಸ್ಪತ್ರೆ ವೆಚ್ಚ ಸಿಕ್ಕಾಪಟ್ಟೆ ಜಾಸ್ತಿಯಿದೆ ಅಂತಾ ಹೇಳುವುದನ್ನು ಕೇಳಿದ್ದೇವೆ. ಹೆಚ್ಚಾಗಿ ಎಲ್ಲರೂ ಆರೋಗ್ಯ ವಿಮೆ ಮಾಡಿರುತ್ತಾರಂತೆ. ಇಲ್ಲದಿದ್ದಲ್ಲಿ ಆಸ್ಪತ್ರೆ ಬಿಲ್ ಕಟ್ಟಲು ಸಾಧ್ಯವಿಲ್ಲವಂತೆ. ಇದೀಗ ಅಮೆರಿಕಾದಲ್ಲೊಬ್ಬ ವ್ಯಕ್ತಿ ಆಸ್ಪತ್ರೆಗೆ ಹೋಗಲು ಭಯಪಟ್ಟು ಓಡಿಹೋಗಿರುವ ವಿಡಿಯೋ ಭಾರಿ ವೈರಲ್ ಆಗಿದೆ.
ಸ್ಟ್ರೆಚರ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಯು ಏಕಾಏಕಿ ಎದ್ದು ತಪ್ಪಿಸಿಕೊಂಡಿರುವ ಘಟನೆಯ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಮೆರೆಡಿತ್ ಶಾರಿಂಗರ್ ಎಂಬುವವರು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯನ್ನು ವೈದ್ಯಕೀಯ ಚಿಕಿತ್ಸೆ ಪಡೆಯಲು ಸ್ಟ್ರೆಚರ್ ಮುಖಾಂತರ ಆಂಬ್ಯುಲೆನ್ಸ್ ಹತ್ತಿಸಲು ಕರೆತರಲಾಗುತ್ತಿತ್ತು. ಇನ್ನೇನು ಆಂಬ್ಯುಲೆನ್ಸ್ ಹತ್ತಬೇಕು ಅನ್ನೋವಷ್ಟರಲ್ಲಿ ಅದೇನಾಯ್ತೋ ಗೊತ್ತಿಲ್ಲ, ಸಡನ್ ಆಗಿ ಜಿಗಿದು ಬೀದಿಯಲ್ಲಿ ಓಡಲು ಪ್ರಾರಂಭಿಸಿದ್ದಾನೆ.
ವ್ಯಕ್ತಿಯು ಮಾದಕ ವ್ಯಸನಿ ಆಗಿದ್ದ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಲ್ಲದೆ ಆರೋಗ್ಯ ವಿಮೆಯ ಕಾರಣ ಅಂತೆಲ್ಲಾ ಲೇವಡಿ ಮಾಡಿದ್ದಾರೆ. ಅಲ್ಲದೆ ವೈದ್ಯಕೀಯ ಶುಲ್ಕ ಪಾವತಿ ಮಾಡುವುದನ್ನು ತಪ್ಪಿಸಲು ಓಡಿ ಹೋಗಿದ್ದಾನೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.
ವರದಿಗಳ ಪ್ರಕಾರ, ರೋಗಿಯೊಬ್ಬನ ಆಂಬ್ಯುಲೆನ್ಸ್ ವೆಚ್ಚ $ 450 ( 33,481.51 ರೂ.) ಆಗುತ್ತದೆ. ಏರ್ ಲಿಫ್ಟ್ $ 21,000 ವೆಚ್ಚ ತಗಲುತ್ತದೆ ಎಂದು ಹೇಳಲಾಗಿದೆ. ಆದರೆ ವ್ಯಕ್ತಿ ಯಾಕೆ ತಪ್ಪಿಸಿಕೊಂಡು ಓಡಿ ಹೋದ ಅನ್ನೋದರ ಬಗ್ಗೆ ನಿಖರವಾದ ಕಾರಣ ಗೊತ್ತಾಗಿಲ್ಲ.