ಉತ್ತರ ಪ್ರದೇಶದ ಗಾಝಿಪುರದಲ್ಲಿ ತನ್ನ ಮಾವನನ್ನೇ ಚಪ್ಪಲಿಯಿಂದ ಥಳಿಸಿದ ವಿಡಿಯೋ ವೈರಲ್ ಆಗಿದೆ. ತಂದೆ ಹಾಗೂ ಸಹೋದರನೊಂದಿಗೆ ಸೇರಿಕೊಂಡು ಸೊಸೆಯೇ ಮಾವನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾಳೆ. ಚಪ್ಪಲಿಯಿಂದ ಬಾರಿಸಿದ್ದಾಳೆ, ಪಂಚ್ ಕೊಟ್ಟು ವೃದ್ಧನನ್ನು ಹಿಂಸಿಸಿದ್ದಾಳೆ.
ಅಷ್ಟಕ್ಕೇ ಸುಮ್ಮನಾಗದೇ ಮಾವನನ್ನು ದರದರನೆ ಹೈವೇಗೆ ಎಳೆದು ತಂದಿದ್ದಾಳೆ. ಸೊಸೆಯ ಪೈಶಾಚಿಕ ವರ್ತನೆಯಿಂದ ಮಾವ ಹೈರಾಣಾಗಿದ್ದು, ಪೊಲೀಸ್ ಚೌಕಿಯೊಂದರ ಸಮೀಪದಲ್ಲೇ ಈ ಕೃತ್ಯ ನಡೆದಿರೋದು ವಿಡಿಯೋದಲ್ಲಿ ಸೆರೆಯಾಗಿದೆ.
ಅಸಹಾಯಕ ವೃದ್ಧ ಸಹಾಯ ಮಾಡುವಂತೆ ಮೂವರಲ್ಲೂ ಅಂಗಲಾಚುತ್ತಿದ್ದ. ಆದ್ರೆ ಕೊಂಚವೂ ಕರುಣೆ ತೋರದ ಸೊಸೆ ಮತ್ತವಳ ಸಹೋದರ ಹಾಗೂ ತಂದೆ ಒಂದೇ ಸಮನೆ ಆತನನ್ನು ಥಳಿಸಿದ್ದಾರೆ. ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಮಹಿಳೆ ಮತ್ತವಳ ತಂದೆಯನ್ನು ಬಂಧಿಸಿದ್ದಾರೆ.
ಆಕೆಯ ಸಹೋದರನಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಗಾಯಗೊಂಡಿರೋ ವೃದ್ಧನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಗೊಳಗಾಗಿರೋ ಸುಖದೇವ್ ಸಿಂಗ್‌ನ ಮಗ ಇತ್ತೀಚೆಗಷ್ಟೆ ತೀರಿಕೊಂಡಿದ್ದ. ಸೊಸೆ ಪುಷ್ಪಾ, ಅವಳ ಸಹೋದರ ಕಲಮೇಶ್ ಹಾಗೂ ತಂದೆ ರಾಮ್ ವಿಲಾಸ್ ಆಸ್ತಿಯನ್ನು ಪುಷ್ಪಾ ಹೆಸರಿಗೆ ಮಾಡುವಂತೆ ಪೀಡಿಸಲಾರಂಭಿಸಿದ್ದರು. ಮನೆಯನ್ನು ಇಬ್ಭಾಗ ಮಾಡುವಂತೆಯೂ ಒತ್ತಾಯಿಸಿದ್ದರು. ಆದ್ರೆ ಸುಖದೇವ್ ಒಪ್ಪದೇ ಇದ್ದಾಗ ಮೂವರೂ ಸೇರಿಕೊಂಡು ಆತನನ್ನು ಥಳಿಸಿದ್ದಾರೆ.