ಮೆಲ್ಬೋರ್ನ್: ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಉನ್ ಅಡ್ಡಿಪಡಿಸಿರುವ ಘಟನೆ ನಡೆದಿದೆ.
ಶುಕ್ರವಾರ ಮೆಲ್ಬೋರ್ನ್‌ನ ಮೌಂಟ್ ವೇವರ್ಲಿಯಲ್ಲಿರುವ ಎಕ್ಸ್‌ಟೆಲ್ ಟೆಕ್ನಾಲಜೀಸ್ ಉತ್ಪಾದನಾ ಘಟಕದಲ್ಲಿ ಸಂಸದ ಗ್ಲಾಡಿಸ್ ಲಿಯು ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಅನಿರೀಕ್ಷಿತ ಅತಿಥಿ ಕಿಮ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಂತೆ ವೇಷ ಧರಿಸಿದ್ದ ವ್ಯಕ್ತಿಯೊಬ್ಬ, ಆಸಿಸ್ ಪ್ರಧಾನಿಯ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾನೆ.
ಪಿಎಂ ಮಾರಿಸನ್ ನಿರ್ಗಮಿಸಿದ ನಂತರ, ಕಿಮ್ ಜಾಂಗ್ ಉನ್ ವೇಷಧಾರಿ, ಹೊವಾರ್ಡ್ ಎಕ್ಸ್ ಪತ್ರಕರ್ತರೊಂದಿಗೆ ಸಂವಾದ ನಡೆಸಿದ್ದಾನೆ. ಕಾರ್ಯಕ್ರಮಕ್ಕೆ ಕಿಮ್ ವೇಷಧಾರಿ ಅಡ್ಡಿಪಡಿಸಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ರೌಂಡ್ ಹೊಡೆಯುತ್ತಿದೆ.
ಹೊವಾರ್ಡ್ ಎಕ್ಸ್, ಕಿಮ್ ಜಾಂಗ್ ಉನ್ ಅವರ ಅನುಕರಣೆಗಾಗಿ ಹೆಸರುವಾಸಿಯಾಗಿದ್ದಾರೆ. 2018ರಲ್ಲಿ, ಉತ್ತರ ಕೊರಿಯಾದ ನಾಯಕ ಮತ್ತು ಆಗಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಶೃಂಗಸಭೆಯ ಕೆಲವು ದಿನಗಳ ಮೊದಲು ಈತ ಸಿಂಗಾಪುರಕ್ಕೆ ಭೇಟಿ ನೀಡಿದ್ದ. ಈ ವೇಳೆ ಹೊವಾರ್ಡ್ ನನ್ನು ಬಂಧಿಸಿ ಪ್ರಶ್ನಿಸಲಾಯಿತು. ಈತನ ನಿಜವಾದ ಹೆಸರು ಲೀ ಹೊವಾರ್ಡ್ ಹೋ ವುನ್ ಎಂಬುದಾಗಿದೆ.