ನವದೆಹಲಿ: ಆಸನದ ಬಗ್ಗೆ ಅಸಮಾಧಾನಗೊಂಡ ಬಿಜೆಪಿ ಸಂಸದ ಡಾ. ಹರ್ಷವರ್ಧನ್ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ಪ್ರಮಾಣ ವಚನ ಸಮಾರಂಭವನ್ನು ತೊರೆದಿರುವ ಘಟನೆ ನಡೆದಿದೆ.
ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಕೇಂದ್ರದ ಮಾಜಿ ಆರೋಗ್ಯ ಸಚಿವ ಮತ್ತು ಬಿಜೆಪಿ ಸಂಸದ ಡಾ. ಹರ್ಷವರ್ಧನ್ ಅವರು ತಮಗೆ ಮೀಸಲಿಟ್ಟ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಭಾತ್ಯಾಗ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿಯ ರಾಜ್ ನಿವಾಸ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಿಂದ ಕೋಪಗೊಂಡ ಸಂಸದ ಹರ್ಷವರ್ಧನ್ ಅವರು ಹೊರನಡೆದಿದ್ದಾರೆ. ಆಸನ ವ್ಯವಸ್ಥೆ ಬಗ್ಗೆ ಅಸಮಾಧಾನಗೊಂಡು ಅವರು ಹೊರನಡೆದಿರುವುದು ತಿಳಿದುಬಂದಿದೆ.
ವೈಯಕ್ತಿಕ ಕಾರಣಗಳಿಂದ ಈ ಹಿಂದಿನ ಅನಿಲ್ ಬೈಜಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ವಿನಯ್ ಕುಮಾರ್ ಸಕ್ಸೇನಾ ಅವರನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಯಿತು.